×
Ad

ಶಾಂತಿಮೊಗರು ರಸ್ತೆ ದುರಸ್ತಿ ಪಡಿಸಲು ಪಿಡಬ್ಲ್ಯುಡಿ ಇಂಜಿನೀಯರ್ ಗೆ ಸೂಚನೆ

Update: 2018-11-04 22:43 IST

ಪುತ್ತೂರು, ನ. 4 : ತಾಲೂಕಿನ ಕುದ್ಮಾರು-ಆಲಂಕಾರು ಸಂಪರ್ಕಿಸುವ ರಸ್ತೆಯ ಡಾಮರೀಕರಣವಾಗದ 1 ಕಿ.ಮೀ. ರಸ್ತೆಯನ್ನು ತಕ್ಷಣವೇ ದುರಸ್ತಿ ಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಪಿಡಬ್ಲ್ಯುಡಿ ಇಂಜಿನೀಯರ್ ಅವರಿಗೆ ಸೂಚಿಸಿದರು.

ಶುಕ್ರವಾರ ಸಂಜೆ ಕುದ್ಮಾರು ಗ್ರಾಮದ ಕೂರ ಮಸೀದಿಗೆ ಭೇಟಿ ನೀಡಿದ ಸಂದರ್ಭ ಸ್ಕಂದಗಣೇಶ ನಗರದ ಬಳಿ ಮಾತನಾಡಿದ ಸಚಿವರು ಈ ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದಕ್ಕಾಗಿ ಬಜೆಟ್‍ನಲ್ಲಿ ಅನುದಾನ ಮಂಜೂರುರಾಗಲಿದೆ. ಡಿಸೆಂಬರ್ ವೇಳೆಗೆ ಅದಕ್ಕೆ ಅನುಮೋದನೆ ದೊರೆತಲ್ಲಿ ಎಲ್ಲ ಪ್ರಕ್ರಿಯೆ ಮುಗಿದು ಮೂರ್ನಾಲ್ಕು ತಿಂಗಳ ಬಳಿಕ ಕಾಮಗಾರಿಗೆ ಚಾಲನೆ ದೊರೆಯಬಹುದು. ಅಲ್ಲಿ ತನಕ ಈ ರಸ್ತೆಯಲ್ಲಿ ಓಡಾಟ ಮಾಡೋದು ಕಷ್ಟಸಾಧ್ಯ. ಹೀಗಾಗಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೊಳಿಸಿ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿಕೊಡಿ ಎಂದು ಲೋಕೋಪ ಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಮೋದ್ ಅವರಿಗೆ ಸೂಚಿಸಿದರು.

ಕ್ರೀಡಾಂಗಣಕ್ಕಾಗಿ ಅನುದಾನ ಒದಗಿಸುವ ಭರವಸೆ 

ಕುದ್ಮಾರಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅನುದಾನ ಒದಗಿಸಿಕೊಡುವಂತೆ ಸ್ಕಂದಶ್ರೀ ಯುವಕ ಮಂಡಲದ ಸದಸ್ಯರು ಮನವಿ ಮಾಡಿಕೊಂಡಾಗ ಮಾತನಾಡಿದ ಸಚಿವರು, ಎಂಎಲ್‍ಎ, ಎಂಪಿ, ಎಂಎಲ್‍ಸಿ ಅನುದಾನದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೊಳಿಸಲು ಅವಕಾಶವಿದೆ. ಅವರಿಗೊಂದು ಮವನಿ ಮಾಡಿ. ಅನುದಾನ ನೀಡದಿದ್ದಲ್ಲಿ ನಾನೇ ಬೇರೆ ಕ್ಷೇತ್ರದ ಎಂಎಲ್‍ಸಿ ಅವರ ಮೂಲಕ ಅನುದಾನ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಶಾಂತಿಮೊಗರು ದೇವಸ್ಥಾನದ ಅನುವಂಶೀಯ ಮೊಕ್ತೇಸರ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಕೂರ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಕೂರತ್, ಬೆಳಂದೂರು ಗ್ರಾಮ ಪಂಚಾಯಿತಿ ಸದಸ್ಯ ನಝೀರ್ ದೇವಸ್ಯ, ಸ್ಕಂದಶ್ರೀ ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ, ಕಾರ್ಯದರ್ಶಿ ಪದ್ಮನಾಭ ಕೆರೆನಾರು,  ಭರತ್ ನಡುಮನೆ, ಚಂದ್ರಶೇಖರ್ ಬರೆಪ್ಪಾಡಿ, ಚಿದಾನಂದ ಕೆರೆನಾರು, ರಾಮಚಂದ್ರ ಬನಾರಿ ಸೇರಿದಂತೆ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News