ಎನ್‌ಆರ್‌ಐ ಸೇವಾ ವಿಭಾಗ ಆರಂಭಿಸಿಸುವ ಗುರಿ -ಅನಿಲ್ ಲೋಬೊ
ಮಂಗಳೂರು, ನ.5: ಎಂ.ಸಿ.ಸಿ ಬ್ಯಾಂಕ್ ಡಿಸೆಂಬರ್ ತಿಂಗಳ ಒಳಗೆ 5 ಎಟಿಎಂಗಳನ್ನು ಪ್ರಾರಂಭಿಸಲಿದೆ. ಜೊತೆಗೆ ಮೊಬೈಲ್ ಬ್ಯಾಂಕಿಂಗ್ ಇ-ಸ್ಟಾಂಪಿಂಗ್, ಹಿರಿಯ ನಾಗರಿಕರ ಸೇವಾ ಕಾರ್ಡ್ ಸೇವೆ, ಎನ್‌ಆರ್‌ಐ ಸೇವೆಗಳ ವಿಭಾಗದ ಉದ್ಘಾಟನೆ ಮತ್ತು ಎನ್‌ಆರ್‌ಐಗಳ ಸಮಾವೇಶ ನಡೆಸಲು ಉದ್ದೇಶಿಸಿದೆ ಎಂದು ಬ್ಯಾಂಕಿನ ನೂತನ ಅಧ್ಯಕ್ಷ ಅನಿಲ್ ಲೋಬೊ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಎರಡು ತಿಂಗಳ ಹಿಂದೆ ಚುನಾವಣೆಯ ಬಳಿಕ ನೂತನವಾಗಿ ಅಧಿಕಾರಕ್ಕೆ ಬಂದಿರುವ ಆಡಳಿತ ಸಮಿತಿ ಐದು ಪ್ರಮುಖ ಯೋಜನೆಗಳನ್ನು ಕಾರ್ಯಗತ ಗೊಳಿಸಲು ನಿರ್ಧರಿಸಿದೆ. ಈ ಪೈಕಿ ನ.10ರಂದು ಉಡುಪಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ಅನಾವರಣ, ಈ ಸ್ಟಾಂಪಿಂಗ್ ಸೌಲಭ್ಯ, ಹಿರಿಯ ನಾಗರಿಕರ ಕಾರ್ಡ್, ಪಾನ್ ಕಾರ್ಡ್ ಉದ್ಘಾಟನೆ, ಎಟಿಎಂ ಉದ್ಘಾಟನೆ ನಡೆಯಲಿದೆ.
ನ. 18ರಂದು ನವೀಕೃತ ಹವಾನಿಯಂತ್ರಿತ ಬಿ.ಸಿ ರೋಡ್ ಶಾಖೆ ಮತ್ತು ಎಟಿಎಂ ಉದ್ಘಾಟನೆ, ನ.25ರಂದು ಬಜ್ಪೆಯಲ್ಲಿ ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಇ ಸ್ಟಾಂಪಿಂಗ್, ಹಿರಿಯ ನಾಗರಿಕರ ಕಾರ್ಡ್, ಪಾನ್‌ಕಾರ್ಡ್ ಉದ್ಘಾಟನೆ ನಡೆಯಲಿದೆ.
ಡಿ. 2ರಂದು ಕಂಕನಾಡಿಯಲ್ಲಿ ನವೀಕೃತ ಸಂಪೂರ್ಣ ಹವಾನಿಯಂತ್ರಿತ ಶಾಖೆ, ಎಟಿಎಂ ಉದ್ಘಾಟನೆ, ಡಿ.16ರಂದು ಎನ್‌ಆರ್‌ಐ ವಿಭಾಗದ ಉದ್ಘಾಟನೆ ಮತ್ತು ಎನ್‌ಆರ್‌ಐ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕರಾವಳಿಯ ಅವಿಭಜಿತ ಜಿಲ್ಲೆಯಲ್ಲಿ 106 ವರ್ಷಗಳ ಇತಿಹಾಸವನ್ನು ಹೊಂದಿರುವ ಎಂಸಿಸಿ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದ ಹಲವು ಸಮಸ್ಯೆಗಳ ನಡು ವೆಯೂ ಕಳೆದ ಹತ್ತು ವರ್ಷಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದೆ 16 ಶಾಖೆಗಳನ್ನು ಹೊಂದಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಎರಡು ಶಾಖೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ವಿದ್ಯಾರ್ಥಿಗಳ ಉಳಿತಾಯ ಖಾತೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾ ಭವಿಷ್ ಖಾತೆ ತೆರೆಯುವವರಿಗೆ ಶೇ ಒಂದೂವರೆ ಹೆಚ್ಚು ಬಡ್ಡಿ (5%) ನೀಡುವ ಗುರಿ ಇದೆ ಎಂದು ಅನಿಲ್ ಲೋಬೊ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿ ಯಲ್ಲಿ ಉಪಾಧ್ಯಕ್ಷ ಜೆರಾಲ್ಡ್ ಜುಡೊ ಡಿ ಸಿಲ್ವ, ಬ್ಯಾಂಕಿನ ಮಹಾ ಪ್ರಬಂಧಕರಾದ ಸುನಿಲ್ ಮಿನೇಜಸ್ ನಿರ್ದೇಶಕರಾದ ಆ್ಯಂಡ್ರೋ ಡಿ ಸೋಜ, ಮಾರ್ಸೆಲ್ ಡಿ ಸೊಜ, ಐರಿನ್ ರೆಬೆಲ್ಲೋ ಅನಿಲ್ ಪತ್ರಾವೋ ಮೊದಲಾದವರು ಉಪಸ್ಥಿತರಿದ್ದರು.