ವಿವಾಹವಾದ ಎರಡೇ ಗಂಟೆಗಳಲ್ಲಿ ಸಾವನ್ನಪ್ಪಿದ ದಂಪತಿ

Update: 2018-11-05 13:36 GMT

ಟೆಕ್ಸಾಸ್, ನ.5: ಮಾಯಾಲೋಕದಂತೆ ಕಾಣುತ್ತಿದ್ದ ಸ್ಥಳದಲ್ಲಿ ಅದ್ಭುತ ಸಮಾರಂಭವೊಂದರಲ್ಲಿ ವಿವಾಹವಾದ ಟೆಕ್ಸಾಸ್ ನಗರದ ಬೆಲ್ವಿಲ್ಲೆಯ ವಿಲ್ ಬೈಲರ್ ಹಾಗೂ ಆರೆಂಜ್ ಫೀಲ್ಡ್ ಎಂಬಲ್ಲಿನ ಬೈಲೀ ಆರ್ಕಮ್ಯಾನ್ ಎಂಬ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟರ್ ಪತನವೊಂದರಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ವಿವಾಹವಾದ ಸ್ವಲ್ಪ ಹೊತ್ತಿನಲ್ಲೇ ಅವರಿಬ್ಬರೂ ತಮ್ಮ ಕುಟುಂಬದ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ದುರಂತದಲ್ಲಿ ಹೆಲಿಕಾಪ್ಟರಿನ ಪೈಲಟ್ ಕೂಡ ಸಾವಿಗೀಡಾಗಿದ್ದಾರೆ.

ಕುಟುಂಬದ ಒಡೆತನದ ಜಮೀನಿಗಿಂತ ಒಂದು ಮೈಲಿ ದೂರದಲ್ಲಿ ಗುಡ್ಡ ಪ್ರದೇಶವೊಂದರ ಬದಿಗೆ ಬಡಿದು ಹೆಲಿಕಾಪ್ಟರ್ ಪತನಗೊಂಡಿತು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಹೆಲಿಕಾಪ್ಟರಿನ ಅವಶೇಷಗಳು ಟೆಕ್ಸಾಸ್ ಸಮೀಪದ ಚಾಕ್ ಬ್ಲಫ್ ಪಾರ್ಕ್ ಸಮೀಪ ರವಿವಾರ ಬೆಳಿಗ್ಗೆ ಪತ್ತೆಯಾಗಿತ್ತು.

ನವದಂಪತಿಯಿದ್ದ ವಿಮಾನ ಹಾರಾಟ ನಡೆಸುತ್ತಿದ್ದಂತೆಯೇ ಅಲ್ಲಿ ಅವರ ನೂರಾರು ಸಂಬಂಧಿಕರು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು. ಆದರೆ ಅವರು ಮತ್ತೆಂದೂ ಹಿಂದಕ್ಕೆ ಬಾರದ ಲೋಕಕ್ಕೆ ಪಯಣಿಸುತ್ತಾರೆಂದು ಅಲ್ಲಿದ್ದವರ್ಯಾರೂ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ದಂಪತಿ ಹೆಲಿಕಾಪ್ಟರಿನಲ್ಲಿ ಪ್ರವಾಸ ಹೊರಟಿದ್ದರೋ ಅಥವಾ ಬೇರೊಂದು ಸ್ಥಳಕ್ಕೆ ಹೊರಟಿದ್ದರೋ ಎಂಬುದು ತಿಳಿದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News