×
Ad

ಕಾರು ಕಳವು ಪ್ರಕರಣ: 17 ವರ್ಷದ ಬಳಿಕ ಆರೋಪಿ ಸೆರೆ

Update: 2018-11-05 19:51 IST

ಪುತ್ತೂರು, ನ. 5: ಕಳೆದ 17 ವರ್ಷಗಳ ಹಿಂದೆ ಕಾರು ಕಳ್ಳತನ ನಡೆಸಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪುತ್ತೂರು ನಗರ ಪೊಲೀಸರು ರವಿವಾರ ಬಂಧಿಸಿ, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳಿದ್ದು ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.

ಸುಳ್ಯ ತಾಲೂಕಿನ ವಿಷ್ಟು ಸರ್ಕಲ್ ನಿವಾಸಿ ಬಿ.ಎಂ.ಹನೀಫ್ ಬಂಧಿತ ಆರೋಪಿ. ಕೊಡಗು ಜಿಲ್ಲೆಯ ಕುಶಾಲನಗರದ ಕೂಡಿಗೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಭಾನುವಾರ ಪತ್ತೆ ಮಾಡಿ ಬಂಧಿಸಿ ಕರೆತಂದಿದ್ದಾರೆ. ಪ್ರಮುಖ ಆರೋಪಿ ಸುಧೀರ್ ಪ್ರಭು ಇನ್ನೂ ಪೊಲೀಸ್ ಬಲೆಗೆ ಬೀಳದೆ ತಲೆಮರೆಸಿಕೊಂಡಿದ್ದಾನೆ.

ಕಳೆದ 2001ನೇ ಮಾರ್ಚ್8ರಂದು ಮಂಗಳೂರಿನ ಹಂಪನಕಟ್ಟೆಯಿಂದ ಜಯಂತ ಎಂಬವರಿಗೆ ಸೇರಿದ ಟಾಟಾ ಸುಮೋ ಬಾಡಿಗೆ ಕಾರನ್ನು ಆರೋಪಿಗಳಿ ಬ್ಬರು ಬಾಡಿಗೆಗೆ ಪಡೆದು ಸಕಲೇಶಪುರ, ಹಾಸನ ಮೊದಲಾದ ಕಡೆಗಳಲ್ಲಿ ಮರದ ವ್ಯಾಪಾರಕ್ಕೆ ಬಳಸಿಕೊಂಡು ಮಾ.12ರಂದು ರಾತ್ರಿ ವೇಳೆ ಪುತ್ತೂರಿಗೆ ಬಂದು, ಇಲ್ಲಿನ ಖಾಸಗಿ ಟೂರಿಸ್ಟ್ ಹೋಂನಲ್ಲಿ ತಂಗಿ ಅಲ್ಲೇ ಕಾರನ್ನು ನಿಲುಗಡೆ ಮಾಡಿದ್ದರು. ಮಾ.13ರಂದು ಸಂಜೆ ಕಾರಿನ ಚಾಲಕ ಇಲ್ಲದ ವೇಳೆಯಲ್ಲಿ ಬಾಡಿಗೆ ಕಾರನ್ನು ಅಪಹರಿಸಿ ಪರಾರಿಯಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ ಅವರ ನಿರ್ದೇಶನದಂತೆ ನಗರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಪರಮೇಶ್ವರ್, ಕಾನ್‌ಸ್ಟೇಬಲ್‌ಗಳಾದ ಮೋಹನ್ ಮತ್ತು ಕಿರಣ್ ಅವರು ಆರೋಪಿ ಹನೀಫ್ ವಾಸ್ತವ್ಯವಿದ್ದ ಕೊಡಗು ಜಿಲ್ಲೆಯ ಕುಶಾಲನಗರದ ಕೂಡಿಗೆ ಎಂಬಲ್ಲಿನ ಬಾಡಿಗೆ ಮನೆಯನ್ನು ಪತ್ತೆ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಹನೀಫ್ ನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News