×
Ad

ಮಂಗಳೂರು: ರಾಷ್ಟ್ರೀಯ ಆಯುರ್ವೇದ ದಿನಾಚರಣೆ

Update: 2018-11-05 19:53 IST

ಮಂಗಳೂರು, ನ.5: ಆಯುಷ್ ಇಲಾಖೆಯು ‘ಸಾರ್ವಜನಿಕ ಆರೋಗ್ಯಕ್ಕಾಗಿ ಆಯುರ್ವೇದ’ ಎಂಬ ಧ್ಯೇಯವಾಕ್ಯದಡಿ ನಗರದ ವೆನ್ಲಾಕ್ ಆಸ್ಪತ್ರೆಯ ಆರ್‌ಎಪಿಸಿಸಿ ಹಾಲ್‌ನಲ್ಲಿ ಸೋಮವಾರ ರಾಷ್ಟ್ರೀಯ ಆಯುರ್ವೇದ ದಿನಾಚರಣೆ- 2018 ಕಾರ್ಯಕ್ರಮ ಆಯೋಜಿಸಿತ್ತು.

ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿ ಭಾರತೀಯ ಶ್ರೇಷ್ಠ ಪರಂಪರೆಯ ಭಾಗವಾಗಿರುವ ಆಯುರ್ವೇದ ಪದ್ಧತಿಯು ಯಾವುದೇ ಮತ, ಧರ್ಮಕ್ಕೆ ಸೀಮಿತವಲ್ಲ. ಅದು ಮನುಷ್ಯನ ಬೆಳವಣಿಗೆಗೆ ಪೂರಕ ವೈದ್ಯಕೀಯ ಕ್ರಮ ಎಂದರು.

ಪ್ರಾಚೀನ ಭಾರತದಲ್ಲೇ ಆಯುರ್ವೇದ ಸಂಸ್ಕೃತಿಯಾಗಿ ಬೆಳೆದಿತ್ತು. ವಿದೇಶಿ ವ್ಯಾಮೋಹ ಮತ್ತು ಬ್ರಿಟಿಷರ ಆಗಮನದಿಂದ ಮೂಲೆಗುಂಪಾಗಿ ಸ್ವಾತಂತ್ರ್ಯದ ಬಳಿಕ ಒಂದು ಧರ್ಮ, ಜಾತಿಗೆ ಸೀಮಿತವಾಯಿತು. ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಆಯುಷ್ ಸಚಿವಾಲಯ ಸ್ಥಾಪಿಸಿ, 2016ರಿಂದ ರಾಷ್ಟ್ರೀಯ ಆಯುರ್ವೇದ ದಿನ ಆರಂಭಿಸುವ ಮೂಲಕ ಮತ್ತೆ ವಿಶೇಷ ಸ್ಥಾನಮಾನ ಕೊಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ನಳಿನ್ ಹೇಳಿದರು.

ಆಯುರ್ವೇದ, ಯೋಗದ ಜತೆಗೆ, ಗಣಿತ, ವಿಜ್ಞಾನದ ಭಾಗಗಳನ್ನು ಜಗತ್ತಿಗೆ ಭಾರತ ಕೊಡುಗೆಯಾಗಿ ನೀಡಿದೆ. ಆಯುರ್ವೇದಿಂದ ರೋಗ ನಿಧಾನವಾಗಿಯಾದರೂ ಸಂಪೂರ್ಣ ಗುಣವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಇಂದು ಕಾಲೇಜುಗಳಲ್ಲೂ ಆಯುರ್ವೇದ ಸೀಟಿಗಾಗಿ ಬೇಡಿಕೆ ಹೆಚ್ಚುತ್ತಿದ್ದು, ವೈದ್ಯರಿಗೆ ವಿಶೇಷ ಗೌರವ ಸಿಗುತ್ತಿದೆ ಎಂದು ನಳಿನ್ ನುಡಿದರು.

ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ ಆಚಾರ್ಯ ಉಪನ್ಯಾಸ ನೀಡಿದರು.

ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾ ಪ್ರಭಾರ ಆರೋಗ್ಯ ಅಧಿಕಾರಿ ಸಿಕಂದರ್ ಪಾಷ, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಎಚ್.ಆರ್. ಮಾತನಾಡಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು. ನಿವೃತ್ತ ಅಧಿಕಾರಿ ಡಾ.ದೇವದಾಸ್ ಕಾರ್ಯಕ್ರಮ ನಿರೂಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News