ಕನ್ನಡದ ಪರಂಪರೆಯನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು: ಡಾ.ಮೋಹನ್ ಆಳ್ವ

Update: 2018-11-05 14:26 GMT

ಕೊಣಾಜೆ, ನ. 5: ಕನ್ನಡ ಭಾಷೆ ನಮ್ಮ ಜೀವನ ಹಾಗೂ ನಮ್ಮ ಸಂಸ್ಕøತಿಯ ಪ್ರತೀಕವಾಗಿದೆ. ಯುವ ಸಮುದಾಯ ಕನ್ನಡದ ಶ್ರೀಮಂತ ಪರಂಪರೆಯನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕಾದ ಅಗತ್ಯತೆ ಇದೆ ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಅವರು ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಆಶ್ರಯದಲ್ಲಿ ವಿವಿಯ ಮಂಗಳ ಸಭಾಂಗಣದಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜರ್ಮನ್, ರಷ್ಯಾ, ಚೀನ ಆಗಿರಬಹುದು ಇಡೀ ಜಗತ್ತಿಗೆ ಎಲ್ಲಾ ಕ್ಷೇತ್ರದಲ್ಲೂ ಲಗ್ಗೆ ಇಟ್ಟಿದೆ. ಆ ಅಭಿವೃದ್ಧಿ ರಾಷ್ಟ್ರಗಳು ಆಂಗ್ಲ ಭಾಷೆಯೇ ಪ್ರಾಮುಖ್ಯ ಅಲ್ಲ ಎಂದು ಬಿಂಬಿಸಿ ಅಲ್ಲಿಯ ದೇಶೀಯ ಭಾಷೆಗೆ ಪ್ರಾಮುಖ್ಯತೆ ನೀಡಿ ಮುನ್ನಡೆಯುತ್ತಿದೆ. ಆದ್ದರಿಂದ ನಾವು ನಮ್ಮ ಕನ್ನಡ ಭಾಷೆಯ ಬಗ್ಗೆಯೂ ಕೀಳರಿಮೆ ಮಾಡದೆ ಅದರ ವಿಶಾಲತೆ, ಸಮೃದ್ಧಿಯ ಬಗ್ಗೆ ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪ್ರಾಧ್ಯಾಪಕ ಹಾಗೂ ಅಂಕಣಕಾರ ಡಾ.ನರೇಂದ್ರ ರೈ ದೇರ್ಲ ಅವರು, ನಮ್ಮ ಜಿಲ್ಲೆಯ ಹೆಸರಿನಲ್ಲಿಯೇ ಕನ್ನಡ ಇದೆ. ಇಲ್ಲಿ ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ ಎಲ್ಲವೂ ಇದೆ. ಇಲ್ಲಿರುವಷ್ಟು ಭಾಷೆಗಳು ಬೇರೆ ಜಿಲ್ಲೆಯಲ್ಲಿಲ್ಲ. ಆದರೂ ಕೂಡಾ ಇಲ್ಲಿ ಕನ್ನಡ ಇಲ್ಲಿ ಮೇಲ್ತರಗತಿಯ ಭಾಷೆಯಾಗಿದ್ದುಕೊಂಡು ಮುನ್ನಡೆಯುತ್ತಿದೆ. ಯಾವ ದೇಶದಲ್ಲಿ ಸಂಬಂಧಗಳು, ಸಹವಾಸಗಳು ಗಟ್ಟಿಯಾಗಿ ಉಳಿಯು ತ್ತವೆಯೋ ಅಲ್ಲಿ ಭಾಷೆಯೂ ಭದ್ರವಾಗಿರುತ್ತದೆ. ಹಾಗೆಯೇ ಸಂಬಂಧಗಳು, ಸಹವಾಸಗಳು ದೂರ ದೂರವಾದಾಗ ಭಾಷೆಯೂ ಕೂಡಾ ನಮ್ಮಿಂದ ದೂರವಾದ ಅನುಭವವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಡಾ.ಕಿಶೊರ್ ಕುಮಾರ್ ಸಿ.ಕೆ ಅವರು, ಕನ್ನಡ ರಾಜ್ಯೋತ್ಸ ವವು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರದೆ ವರ್ಷವಿಡೀ ನಮ್ಮ ಕನ್ನಡ ನಾಡು ನುಡಿಯ ಹಬ್ಬ ಆಚರಿಸುವಂತಾಗಬೇಕು. ಮಂಗಳೂರು ವಿವಿಯು ಕೂಡಾ ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಮಂಗಳೂರು ವಿವಿಯ ವಿಶ್ವದ ವಿವಿಗಳ ಪೈಕಿ175 ಸ್ಥಾನ ಹಾಗೂ ದೇಶ ದಲ್ಲಿ 43ನೇ ಸ್ಥಾನ ರ್ಯಾಂಕನ್ನು ಪಡೆದುಕೊಂಡಿರುವುದು ಹೆಮ್ಮೆಯ, ಸಂತೋಷದ ವಿಚಾರವಾಗಿದ್ದು ಈ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ವಿವಿ ಅದ್ಯಾ ಪಕರು, ಅದ್ಯಾಪಕೇತರರು ಹಾಗೂ ವಿದ್ಯಾರ್ಥಿಗಳ ಪಾತ್ರವೂ ಇದೆ ಎಂದರು.

ಸಮಾರಂಭದಲ್ಲಿ ಮಂಗಳೂರು ವಿವಿಯ ಕುಲಸಚಿವ ಪ್ರೊ.ಎ.ಎಂ.ಖಾನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮ ನಿರ್ದೇಶನಾಲಯದ ಪ್ರೊ.ಉದಯ ಬಾರ್ಕೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News