ಕಾರಂತಕೋಡಿ: ಡ್ರೈನೇಜ್, ಸಂಪರ್ಕ ರಸ್ತೆ ಸರಿಪಡಿಸುವಂತೆ ಒತ್ತಾಯ
ಬಂಟ್ವಾಳ, ನ. 5: ಡ್ರೈನೇಜ್ ಅವ್ಯವಸ್ಥೆ ಹಾಗೂ ಸಂಪರ್ಕ ರಸ್ತೆ ಹಾನಿಯಾಗಿದ್ದು, ಇದರಿಂದ ಗ್ರಾಮಸ್ಥರಿಗೆ ತೊಂದರೆ ಅನುಭವಿಸುತ್ತಿದ್ದಾರೆ ಬಂಟ್ವಾಳ ತಾಲೂಕಿನ ಮೊಡಂಕಾಪು ಸಮೀಪದ ಕಾರಂತ ಕೋಡಿ ನಿವಾಸಿಗಳು ಆರೋಪಿಸಿದ್ದಾರೆ.
ಕಾರಂತಕೋಡಿ ಪರಿಸರದಲ್ಲಿ ವಸತಿ ಸಂಕೀರ್ಣಗಳು, ಅಂಗಡಿಗಳು, ಮಾಂಸದಂಗಡಿ, ಹೊಟೇಲ್, ವಾಹನ ಸರ್ವೀಸ್ ಸ್ಟೇಶನ್‍ಗಳಿದ್ದು, ಇವುಗಳ ದುರ್ನಾತ ಕೊಳಚೆ ನೀರನ್ನು ಮಳೆನೀರು ಹೋಗಲು ನಿರ್ಮಿಸಿರುವ ಕಣಿಗೆ ಬಿಡಲಾಗುತ್ತಿದೆ. ಇದರಿಂದ ಕೊಳಚೆ ನೀರು ಈ ಕಣಿಯಲ್ಲಿ ಸರಾಗವಾಗಿ ಹೋಗದೇ ಅಲ್ಲಲ್ಲಿ ಹೆಪ್ಪುಗಟ್ಟಿ, ಶೇಖರಣೆಯಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೊಳಚೆ ನೀರು ಶೇಖರಣೆಯಿಂದ ಕಾರಂತಕೋಡಿ ಪರಿಸರವಿಡೀ ದುರ್ನಾತ ಬೀರುತ್ತಿದ್ದು, ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ಅಧಿಕವಾಗಿದ್ದು, ಇದರಿಂದ ಮಕ್ಕಳು, ವೃದ್ಧರ ಆರೋಗ್ಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅದಲ್ಲದೆ, ಇಡೀ ಗ್ರಾಮಸ್ಥರು ರೋಗದ ಭೀತಿ ಎದುರಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಅದಲ್ಲದೆ, ಇಲ್ಲಿನ ಕೈಕಂಬ-ಪೊಳಲಿ ಕ್ರಾಸ್ ಮುಖ್ಯ ರಸ್ತೆಯಿಂದ ಕವಲೊಡೆದಿರುವ ಕಾರಂತ ಕೋಡಿಯ ರಸ್ತೆಯು ಹದೆಗಟ್ಟಿದ್ದು, ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಪರಿಸರದ ಅವ್ಯವಸ್ಥೆಯ ಸ್ಥಳೀಯ ಪುರಸಭಾ ಸದಸ್ಯ, ಪುರಸಭಾ ಮುಖ್ಯಾಧಿಕಾರಿಗಳಿಗೆ ಹಾಗೂ ಆರೋಗ್ಯ ಪರಿವೀಕ್ಷ ರಿಗೂ ಮನವಿ ಮೂಲಕ ಒತ್ತಾಯಿಸಲಾಗಿದೆ. ಆದರೆ, ಆರೋಗ್ಯ ಇಲಾಖೆಯಾಗಲಿ, ಪುರಸಭಾ ಆಡಳಿತವಾಗಲಿ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಕೂಡಾ ಮನವಿ ಮೂಲಕ ಒತ್ತಾಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಸರದ ಅವ್ಯವಸ್ಥೆಯ ಬಗ್ಗೆ ಸರಿಪಡಿಸದಿದ್ದರೆ ಕಾನೂನು ರೀತಿಯ ಹೋರಾಟ ಮಾಡಲಾವುದು ಎಂದು ನಾಗರಿಕರು ಎಚ್ಚರಿಸಿದ್ದಾರೆ.