ಎಂಆರ್‌ಪಿಎಲ್‌ನಿಂದ ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆ: ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಪ್ರತಿಭಟನೆ
ಮಂಗಳೂರು, ನ.5: ನಗರ ಹೊರವಲಯದ ಎಂಆರ್‌ಪಿಎಲ್ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಗಳ ಮೂಲಕ ನಾಲ್ಕನೆ ಹಂತದಲ್ಲಿ ಸುಮಾರು 1,011 ಎಕರೆ ಜಮೀನನ್ನು ಮತ್ತೆ ಸ್ವಾಧೀನಪಡಿಸಲು ಮುಂದಾಗಿರುವುದನ್ನು ಖಂಡಿಸಿ ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷ ವಿಲಿಯಂ ಡಿಸೋಜ ಎಂಆರ್‌ಪಿಎಲ್ ಆಸುಪಾಸಿನ ಕುತ್ತೆತ್ತೂರು, ಪೆರ್ಮುದೆ, ತೆಂಕ ಎಕ್ಕಾರು, ಕಂದಾವರ ಗ್ರಾಮಗಳ ಮೂಲವಾಸಿಗಳು ಜಮೀನು ಬಿಟ್ಟುಕೊಡಲು ಸಿದ್ಧರಿಲ್ಲ. ಆದರೆ, ಬೇರೆ ಕಡೆಯಿಂದ ವಲಸೆ ಬಂದು ಭೂಮಿಯ ಸಂಪತ್ತನ್ನು ದೋಚಿದವರು ತಮ್ಮ ಭೂಮಿಯ ಜೊತೆ ಕೃಷಿಯೋಗ್ಯ ಭೂಮಿಯನ್ನೂ ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ನಾಗಾರ್ಜುನಕ್ಕಾಗಿ 900 ಎಕರೆ ಭೂಮಿಯನ್ನೂ ಕೂಡಾ ಹೀಗೆ ಸ್ವಾಧೀನಪಡಿಸಿಕೊಂಡಿದ್ದರು. ಅದರ ವಾರಸುದಾರರಿಗೆ ಇನ್ನೂ ಕೂಡಾ ಪರಿಹಾರ ಧನ ಸಿಕ್ಕಿಲ್ಲ. ಸರಕಾರ, ಜನಪ್ರತಿನಿಧಿಗಳು ರೈತರ ಸಂಕಷ್ಟ ಅರಿತುಕೊಳ್ಳುತ್ತಿಲ್ಲ. ಪ್ರಕೃತಿಯ ರಕ್ಷಣೆಗೆ ಬರುತ್ತಿಲ್ಲ ಎಂದು ಆರೋಪಿಸಿದರು.
ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್ ಮಾತನಾಡಿ ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಈ ಕೈಗಾರಿಕಾ ಕಂಪೆನಿಗಳಿಗೆ ಗುಡ್ಡಗಾಡು ಪ್ರದೇಶ ಬೇಡವಾಗಿದೆ. ಅದಕ್ಕೆ ಹಚ್ಚಹಸಿರಿನಿಂದ ಕಂಗೊಳಿಸುವ ಕೃಷಿ ಭೂಮಿಯೇ ಬೇಕಾಗಿದೆ. ಎಂಆರ್‌ಪಿಎಲ್‌ನ ನಾಲ್ಕನೆ ಹಂತದ ಯೋಜನೆಗಳಿಗೆ ಬೇಕಾದ ಭೂಮಿಯನ್ನು ಸ್ವಾಧೀನಪಡಿಸಲು ಬಿಡುವುದಿಲ್ಲ ಎಂದರು.
ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ವಕ್ತಾರ ಟಿ.ಆರ್.ಭಟ್, ವಿವಿಧ ಸಂಘಟನೆಗಳ ಮುಖಂಡರಾದ ವಿದ್ಯಾ ದಿನಕರ್, ಪ್ರಕಾಶ್ ವಿ.ಎನ್., ದಿವಾಕರ್, ರವಿಕಿರಣ್ ಪುಣಚ, ಮಧುಕರ ಅಮೀನ್, ಲಾರೆನ್ಸ್ ಡಿಕುನ್ಹಾ, ಹೇಮಲತಾ ಭಟ್, ರಾಜೇಂದ್ರ ಕುಮಾರ್, ಶಬ್ಬೀರ್ ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಮಂಗಳಮುಖಿಯರೂ ಕೂಡಾ ಪಾಲ್ಗೊಂಡು ಎಂಆರ್‌ಪಿಎಲ್‌ಗೆ ಭೂಸ್ವಾಧೀನಪಡಿಸುವ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಅದರಂತೆ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿ ಅಹವಾಲು ಆಲಿಸಿದರು. ಭೂದರ ನಿಗದಿಯ ಸಭೆಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರೂ ಹೈಕೋರ್ಟ್‌ನ ಸೂಚನೆಯಂತೆ ಸಭೆ ನಡೆಸಲಾಗುತ್ತದೆ. ಹಾಗಾಗಿ ಸಭೆಯನ್ನು ರದ್ದುಗೊಳಿಸಲಾಗದು. ತಮ್ಮ ಮನವಿಯನ್ನು ಸರಕಾರಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ವಾರದೊಳಗೆ ಸಾರ್ವಜನಿಕ ಸಭೆ: ಜಿಲ್ಲಾಧಿಕಾರಿ
ಎಂಆರ್‌ಪಿಎಲ್‌ನ ನಾಲ್ಕನೆ ಹಂತದ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕುತ್ತೆತ್ತೂರು, ಪೆರ್ಮುದೆ ಸಹಿತ ಆಸುಪಾಸಿನ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಲು ವಾರದೊಳಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಇಂದಿನ ಸಭೆಯನ್ನು ಕೈ ಬಿಡಬೇಕು ಎಂಬ ಆಗ್ರಹವಿದೆ. ಆದರೆ, ಸಭೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ. ಈಗಾಗಲೆ ಬೈಕಂಪಾಡಿಯ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಭೂದರ ನಿಗದಿಗೆ ಸಂಬಂಧಿಸಿ ಭೂಮಿ ಕಳಕೊಳ್ಳುವವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ಸಭೆ ನಡೆಯುವ ಕಾರಣ ಅದನ್ನು ಸದ್ಯ ಕೈ ಬಿಡಲು ಸಾಧ್ಯವಿಲ್ಲ. ಆದಾಗ್ಯೂ ಮುಂದಿನ ವಾರ ಸಾರ್ವಜನಿಕ ಸಭೆ ಕರೆದು ಅಹವಾಲು ಆಲಿಸುವುದಾಗಿ ತಿಳಿಸಿದರು.