×
Ad

ಅಜ್ಞಾನ ತೋರಿದ ಎಸ್.ಎಲ್. ಭೈರಪ್ಪ: ಸಿಪಿಐ ಆರೋಪ

Update: 2018-11-05 20:07 IST

ಮಂಗಳೂರು, ನ.5: ದ.ಕ ಜಿಲ್ಲೆಯ ಅಭಿವೃದ್ಧಿಗೆ ಎಡಪಂಥೀಯ ಚಳವಳಿ ಮಾರಕ ಎನ್ನುವ ಸಾಹಿತಿ ಎಸ್.ಎಲ್ ಭೈರಪ್ಪರ ಮಾತುಅಜ್ಞಾನದಿಂದ ಕೂಡಿದೆ. ಅವರು ಜಿಲ್ಲೆಯ ಜನಜೀವನದ ಇತಿಹಾಸದ ಬಗ್ಗೆ ಕುರುಡುತನ ಮೆರೆದಿದ್ದಾರೆ ಎಂದು ಸಿಪಿಐ ಮಂಗಳೂರು ತಾಲೂಕು ಸಮಿತಿ ಆರೋಪಿಸಿದೆ.

ಅವಿಭಜಿತ ದ.ಕ.ಜಿಲ್ಲೆಗಳಲ್ಲಿ ಕೃಷಿ ಕೂಲಿ, ಹೆಂಚು, ಗೋಡಂಬಿ, ಬೀಡಿ ಕಾರ್ಮಿಕರೇ ಹೆಚ್ಚಾಗಿದ್ದರು. ದುಡಿತಕ್ಕೆ ತಕ್ಕ ಪ್ರತಿಫಲಕ್ಕಾಗಿ ಸಂಘಟಿತರಾಗಿದ್ದರು. ಅನ್ನ ಕೊಟ್ಟ ಉದ್ಯಮವನ್ನು ಬೆಳೆಸುವುದರೊಂದಿಗೆ ತಾನೂ ಅಭಿವೃದ್ಧಿಗೊಂಡರು. ಇವರೆಲ್ಲಾ ಕಮ್ಯುನಿಸ್ಟ್ ಚಳವಳಿಯೊಂದಿಗೆ ಸಂಘಟಿತರಾಗಿ ತನ್ನ ದುಡಿತದ ಫಲವನ್ನು ಪಡೆದ ಕಾರಣದಿಂದಲೇ ಅವರ ಮಕ್ಕಳು ಇಂದು ಬೇರೆ ಬೇರೆ ಕೆಲಸದಲ್ಲಿ, ಉದ್ಯಮದಲ್ಲಿ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಯಿತು.

ಕಮ್ಯುನಿಸ್ಟ್ ಸಂಘಟನೆಯ ಮೂಲಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಿಲ್ಲೆಯ ಜನರ ಪಾತ್ರ ಹಿರಿದಾದದ್ದು ಎಂಬ ವಿಚಾರ ಬೈರಪ್ಪನವರಿಗೆ ತಿಳಿದಿದ್ದರೂ ತನ್ನ ಬಲಪಂಥೀಯ ಶಿಷ್ಯರನ್ನು ಮೆಚ್ಚಿಸಲು ಈ ರೀತಿ ಹೇಳಿದ್ದಾರೆಂದು ಸಿಪಿಐ ಮಂಗಳೂರು ತಾಲೂಕು ಸಮಿತಿ ಕಾರ್ಯದರ್ಶಿ ವಿ.ಎಸ್. ಬೇರಿಂಜ ಆರೋಪಿಸಿದ್ದಾರೆ.

ಬಿ.ವಿ. ಕಕ್ಕಿಲ್ಲಾಯ, ಶಾಂತಾರಾಮ ಪೈ, ಸಿಂಪ್ಸನ್ ಸೋನ್ಸ್, ಕೃಷ್ಣ ಶೆಟ್ಟಿ, ಲಿಂಗಪ್ಪಸುವರ್ಣ, ದಾಸಪ್ಪಮಾಸ್ಟರ್, ಮಹಾಬಲೇಶ್ವರ ಭಟ್, ಎಂ.ಎಚ್ ಕೃಷ್ಣಪ್ಪ, ವಿಶ್ವನಾಥ ನಾಯ್ಕಿ, ಅಡ್ಡೂರು ಶಿವಶಂಕರ್ ರಾವ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರರು ಪ್ರವರ್ತಿಸಿದ ನಾಡು ಇದು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ, ಹಲವಾರು ಬಾರಿ ಜೈಲುವಾಸ ಅನುಭವಿಸಿದ ಇಂತಹ ಹೋರಾಟಗಾರರ ಬಗ್ಗೆ ಬೈರಪ್ಪ ತಿಳಿದುಕೊಳ್ಳದೆ ಮಾತನಾಡಿರುವುದು ಅಕ್ಷಮ್ಯ. ಜಿಲ್ಲೆಯ ಜನರ ಚಳವಳಿಯ ಬಗ್ಗೆ ಬಿ.ವಿ. ಕಕ್ಕಿಲ್ಲಾಯರ, ಸಿಂಪ್ಸನ್ ಸೋನ್ಸರ ಜೀವನ ಚರಿತ್ರೆಯನ್ನು ಓದಬೇಕೆಂದು ಸಿಪಿಐ ಸಲಹೆ ನೀಡಿದೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಬಲಪಂಥೀಯರು ಬ್ರಿಟಿಷರ ಪರವಹಿಸಿದ ವಿಚಾರಗಳು ಬೈರಪ್ಪನವರಿಗೆ ಗೊತ್ತಿಲ್ಲವೆ? ಕರಾವಳಿ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು, ಜೈಲು ಶಿಕ್ಷೆ ಅನುಭವಿಸಿದ ಯಾರಾದರೂ ಒಬ್ಬ ಬಲಪಂಥೀಯ ಸ್ವಾತಂತ್ರ್ಯ ಹೋರಾಟಗಾರನ ಹೆಸರನ್ನು ಹುಡುಕಿ ಕೊಡಿ ಎಂದು ಭೈರಪ್ಪರಿಗೆ ಸಿಪಿಐ ಸವಾಲು ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News