×
Ad

ನ.10ರಂದು ‘ವಿಶ್ವಮಾತಾ ಗೋಮಾತಾ’ ನೃತ್ಯನಾಟಕ ಪ್ರದರ್ಶನ

Update: 2018-11-05 20:29 IST

ಉಡುಪಿ, ನ.5: ಕಿನ್ನಿಗೋಳಿಯ ಶ್ರೀಶಕ್ತಿದರ್ಶನ ಯೋಗಾಶ್ರಮದ ವತಿ ಯಿಂದ ಉಡುಪಿ ಸತ್ಸಂಗ ಪ್ರಸ್ತುತ ಪಡಿಸುವ ‘ವಿಶ್ವಮಾತಾ ಗೋಮಾತಾ’ ನೃತ್ಯ ನಾಟಕದ ಪ್ರದರ್ಶನಗಳು ನ.10ರಂದು ಉಡುಪಿ ಪೂರ್ಣ ಪ್ರಜ್ಞಾ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಬೆಳಗ್ಗೆ 11ಗಂಟೆಗೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ಪ್ರದರ್ಶನವನ್ನು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದು, ಸಂಜೆ 5:30ಕ್ಕೆ ಸಾರ್ವಜನಿಕರಿಗೆ ಆಯೋಜಿಸಲಾದ ಪ್ರದರ್ಶನದಲ್ಲಿ ಮುಖ್ಯ ಅತಿಥಿಗಳಾಗಿ ಬೈಲೂರು ಮಠದ ಮಠದ ಶ್ರೀವಿನಾಯಕಾನಂದ ಸ್ವಾಮೀಜಿ, ಇಂಡಿಯಾ ನೌ ಫೌಂಡೇಶನ್‌ನ ಶಾಂತಾರಾಮ್ ಅಚ್ಯುತ್ ಭಂಡಾರ್ಕರ್ ಭಾಗವಹಿಸಲಿರುವರು ಎಂದು ಶಕ್ತಿದರ್ಶನ ಯೋಗಾಶ್ರಮದ ಯೋಗಾಚಾರ್ಯ ದೇವಬಾಬಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ನಶಿಸಿ ಹೋಗುತ್ತಿರುವ ಗೋ ಸಂಪತ್ತನ್ನು ಉಳಿಸಿ, ದೇಶಿ ತಳಿಗಳ ಪ್ರಾಮುಖ್ಯತೆಯ ಅರಿವನ್ನು ಜನರಿಗೆ ಮೂಡಿಸುವುದು ಈ ನಾಟಕದ ಉದ್ದೇಶವಾಗಿದೆ. ಈಗಾಗಲೇ 9 ರಾಜ್ಯಗಳಲ್ಲಿ 44 ಪ್ರದರ್ಶನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜ್ಯೋತಿ, ಪವಿತ್ರ, ಸೋಮನಾಥ ಮಲ್ಯ, ಶಶಿಧರ್, ಪ್ರಸನ್ನ ಲಕ್ಷ್ಮೀ ಉಪಸ್ಥಿತರಿದ್ದರು.

ಜರ್ಸಿ ದನ ಗೋಮಾತೆ ಅಲ್ಲ
ವಿದೇಶಿ ತಳಿ ಜರ್ಸಿ ದನ ಗೋಮಾತೆ ಅಲ್ಲ. ಅದು ಪ್ರಯೋಗಾಲಯದಲ್ಲಿ ಹುಟ್ಟಿದ ಕಂಪ್ಯೂಟರ್ ದನ. ಪ್ರಾಕೃತಿಕವಾಗಿ ಅದು ಗೋವು ಅಲ್ಲ. ಅದರ ಹಾಲು ಕುಡಿದರೆ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಬರುತ್ತವೆ ಎಂಬುದು ಈಗಾಗಲೇ ಸಂಶೋಧನೆಯಿಂದ ಸಾಬೀತಾಗಿದೆ ಎಂದು ಶಕ್ತಿದರ್ಶನ ಯೋಗಾಶ್ರಮದ ಯೋಗಾಚಾರ್ಯ ದೇವಬಾಬಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News