ಜಾಗತಿಕ ಮಾರುಕಟ್ಟೆಯಲ್ಲಿನ ಋಣಾತ್ಮಕತೆ, ದುರ್ಬಲ ರೂ.ನಿಂದಾಗಿ 61 ಅಂಶ ಕುಸಿದ ಸೆನ್ಸೆಕ್ಸ್

Update: 2018-11-05 15:02 GMT

ಮುಂಬೈ,ನ.5: ಏಷ್ಯಾದ ಶೇರು ಮಾರುಕಟ್ಟೆಗಳಲ್ಲಿನ ಋಣಾತ್ಮಕತೆ,ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಮರದ ಸುತ್ತಲಿನ ಅನಿಶ್ಚಿತತೆ ಹಾಗೂ ರೂಪಾಯಿ ಕುಸಿತದಿಂದಾಗಿ ಬಾಂಬೆ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 61 ಅಂಶ ಪತನಗೊಂಡು,35,000ಕ್ಕೂ ಕೆಳಗೆ ಮುಕ್ತಾಯಗೊಂಡಿದೆ.

ವಿದೇಶಿ ಬಂಡವಾಳದ ಹೊರಹರಿವು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಕುಸಿತದ ಪರಿಣಾಮ ಮಧ್ಯಂತರ ವಹಿವಾಟಿನಲ್ಲಿ 34,811.60ಕ್ಕೆ ಇಳಿದ ಸೆನ್ಸೆಕ್ಸ್ ಬಳಿಕ ಚೇತರಿಸಿಕೊಂಡು 60.73 ಅಂಶಗಳ ನಷ್ಟದೊಂದಿಗೆ 34,950.92ರಲ್ಲಿ ಮುಕ್ತಾಯಗೊಂಡಿತು.

ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ 29 ಅಂಶಗಳ ನಷ್ಟದೊಡನೆ 10,524ರಲ್ಲಿ ದಿನದಾಟವನ್ನು ಮುಗಿಸಿದೆ.

ನಕಾರಾತ್ಮಕ ಪ್ರಭಾವದಿಂದಾಗಿ ಡಾಲರ್‌ನೆದುರು 67 ಪೈಸೆಗಳಷ್ಟು ಕುಸಿದು 73.12ಕ್ಕೆ ಇಳಿದಿದ್ದ ರೂಪಾಯಿ ನಂತರ 72.86ಕ್ಕೆ ಚೇತರಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News