ಎಸ್‌ಬಿಐ ನಿವ್ವಳ ಲಾಭ ಶೇ.67ರಷ್ಟು ಇಳಿಕೆ
ಹೊಸದಿಲ್ಲಿ,ನ.5: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ 2019,ಸೆ.30ಕ್ಕೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ಒಟ್ಟೂ ನಿವ್ವಳ ಲಾಭದಲ್ಲಿ ಶೇ.67ರಷ್ಟು ಕುಸಿತವನ್ನು ದಾಖಲಿಸಿದ್ದು, 576.46 ಕೋ.ರೂ.ಗೆ ಇಳಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕಿನ ಒಟ್ಟು ನಿವ್ವಳ ಲಾಭ 1840.43 ಕೋ.ರೂ.ಆಗಿತ್ತು.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೆಟ್ಟ ಸಾಲಗಳಿಗಾಗಿ ಅಧಿಕ ಅವಕಾಶವನ್ನು ಕಲ್ಪಿಸಿದ್ದರಿಂದ ಬ್ಯಾಂಕು 4,875.85 ಕೋ.ರೂ.ಗಳ ನಿವ್ವಳ ನಷ್ಟವನ್ನು ದಾಖಲಿಸಿತ್ತು.
ಕಳೆದ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಬ್ಯಾಂಕಿನ ಒಟ್ಟು ಆದಾಯ 74,948.51 ಕೋ.ರೂ.ಗಳಾಗಿದ್ದರೆ ಪ್ರಸಕ್ತ ವರ್ಷದ ಇದೇ ಅವಧಿಯಲ್ಲಿ 79,302.72 ಕೋ.ರೂ.ಗೇರಿದೆ.
ಕಳೆದ ವರ್ಷದ ಸೆ.30ರಂದು ಒಟ್ಟು ಸಾಲಗಳ ಶೇ.9.83ರಷ್ಟಿದ್ದ ಒಟ್ಟು ಅನುತ್ಪಾದಕ ಆಸ್ತಿಗಳ ಪ್ರಮಾಣ ಈ ವರ್ಷದ ಸೆ.30ಕ್ಕೆ ಇದ್ದಂತೆ ಶೇ.9.95ಕ್ಕೇರಿದೆ. ನಿವ್ವಳ ಸಾಲಗಳ ಶೇ.4.53ರಷ್ಟಿದ್ದ ನಿವ್ವಳ ಅನುತ್ಪಾದಕ ಸಾಲಗಳ ಪ್ರಮಾಣ ಶೇ.4.84ಕ್ಕೇರಿದೆ.
ಭವಿಷ್ಯದಲ್ಲಿ ಎದುರಾಗಬಹುದಾದ ಕೆಟ್ಟ ಸಾಲಗಳನ್ನು ಭರಿಸಲು ತೆಗೆದಿರಿಸಲಾದ ಮೊತ್ತ ಪ್ರಸಕ್ತ ತ್ರೈಮಾಸಿಕದ ಅಂತ್ಯದಲ್ಲಿ 10,381.31 ಕೋ.ರೂ.ಗಿಳಿದಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ಈ ಮೊತ್ತ 16,842.18 ಕೋ.ರೂ.ಆಗಿತ್ತು.