×
Ad

ಪಕ್ಷ ಸಂಘಟನೆಯಲ್ಲಿ ನಿಷ್ಕ್ರಿಯತೆ: ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಮಿಥುನ್ ರೈ ಅಮಾನತು

Update: 2018-11-05 20:49 IST

ಬೆಂಗಳೂರು, ನ. 5 : ಪಕ್ಷದ ಚಟುವಟಿಕೆ ಹಾಗು ಸಂಘಟನೆಯಲ್ಲಿ ನಿಷ್ಕ್ರಿಯತೆ ತೋರಿಸಿದ್ದಾರೆ ಎಂಬ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್  ಅಧ್ಯಕ್ಷ ಮಿಥುನ್ ರೈ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

ಈ ಬಗ್ಗೆ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗು ಯುವ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರವೀಂದ್ರದಾಸ್ ಅವರು ಆದೇಶ ಹೊರಡಿಸಿದ್ದಾರೆ.

ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ, ನೋಟೀಸು ನೀಡಿದ್ದಕ್ಕೆ ಉತ್ತರ ನೀಡಿಲ್ಲ ಹಾಗು ಪಕ್ಷದ ಸಭೆಗಳಿಗೆ ಹಾಜರಾಗುತ್ತಿಲ್ಲ ಎಂಬ ಕಾರಣಗಳಿಗಾಗಿ ಮಿಥುನ್ ರೈ ಸಹಿತ ರಾಜ್ಯದ 10 ಜಿಲ್ಲೆಗಳ ಯುವ ಕಾಂಗ್ರೆಸ್ ಅಧ್ಯಕ್ಷರನ್ನು, ರಾಜ್ಯ ಯುವ ಕಾಂಗ್ರೆಸ್ ನ  ಎಂಟು ಮಂದಿ ಕಾರ್ಯದರ್ಶಿಗಳನ್ನು ಹಾಗು ರಾಜ್ಯ ಯುವ ಕಾಂಗ್ರೆಸ್ ನ ಒಬ್ಬ ಉಪಾಧ್ಯಕ್ಷರನ್ನು ಅಮಾನತು ಮಾಡಲಾಗಿದೆ ಎಂದು ರವೀಂದ್ರದಾಸ್ ವಾರ್ತಾಭಾರತಿಗೆ ತಿಳಿಸಿದ್ದಾರೆ.

ಮಿಥುನ್ ರೈ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂಡಬಿದ್ರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಲ್ಲಿಂದ ಮಾಜಿ ಸಚಿವ ಅಭಯಚಂದ್ರ ಅವರಿಗೇ ಪಕ್ಷ ಮತ್ತೆ ಅವಕಾಶ ನೀಡಿತ್ತು. ಆದರೆ ಮೂಡಬಿದ್ರೆಯಿಂದ ಸ್ಪರ್ಧಿಸಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದ ಮಿಥುನ್ ರೈ ಇದರಿಂದ ಬೇಸರಿಸಿಕೊಂಡಿದ್ದರು. ಇದೀಗ ಪಕ್ಷದ ಸಂಘಟನೆ ಮಾಡಬೇಕಾದ ಯುವ ಘಟಕವೇ ನಿಷ್ಕ್ರಿಯವಾಗಿದೆ ಎಂದು ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಮಿಥುನ್ ರೈ " ಅಕ್ಟೊಬರ್ 19 ಕ್ಕೆ ಒಂದು ಸಭೆ ಕರೆದಿದ್ದರು. ನವರಾತ್ರಿ ಸಂದರ್ಭ ಆಗಿದ್ದ ಕಾರಣ ಆ ಸಭೆಯಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನೋಟೀಸ್ ನೀಡಿದ್ದರು. ಅದಕ್ಕೆ ನಾನು ಉತ್ತರ ನೀಡುತ್ತೇನೆ. ಅದಕ್ಕೂ ಮೊದಲು ಜೈಪುರದಲ್ಲಿ ನಡೆದ ಸಭೆಯಲ್ಲಿ ನಾನು ಪಾಲ್ಗೊಂಡಿದ್ದೆ" ಎಂದು ವಾರ್ತಾ ಭಾರತಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News