×
Ad

ಪ್ರತ್ಯೇಕ ಪ್ರಕರಣ: ಮೂರು ಮಕ್ಕಳ ಅಪಹರಣ

Update: 2018-11-05 22:40 IST

ಮಂಗಳೂರು, ನ.5: ನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮಕ್ಕಳು ಅಪಹರಣವಾದ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಈ ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ಇಕೊನಾಮಿಕ್ ಆ್ಯಂಡ್ ನಾರ್ಕೊಟಿಕ್ಸ್ ಕ್ರೈಮ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

1. ಗ್ರಾಮಾಂತರ ಠಾಣೆ: ಒಡಿಶಾ ಮೂಲದ ಲಕ್ಷ್ಮೀ(17) ಅವರನ್ನು 2015ರ ಅ. 31ರಂದು ನಗರದ ಜೆಪ್ಪಿನಮೊಗರು ಪ್ರಜ್ಞಾ ಸ್ವಾದಾರ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬಾಲಕಿಯು 2015ರ ನ. 6ರಂದು ಕೇಂದ್ರದಿಂದ ಕಾಣೆಯಾಗಿದ್ದಳು. ಬಾಲಕಿಯನ್ನು ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆ ಅಪಹರಿಸಿರುವ ಸಾಧ್ಯತೆಯಿದೆ ಎಂದು ಪ್ರಜ್ಞಾ ಸ್ವಾದಾರ ಕೇಂದ್ರದ ಅಧೀಕ್ಷಕಿ ಯಶೋಧ ಎಂಬವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚಹರೆ: 5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಗುಂಗುರು ಕೂದಲು ಹೊಂದಿದ್ದಾಳೆ. ಹಸಿರು ಬಣ್ಣದ ಟಾಪ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಳು. ಹಿಂದಿ ಭಾಷೆ ಮಾತನಾಡುತ್ತಾಳೆ.

2.ಕಂಕನಾಡಿ ನಗರ ಠಾಣೆ: ಜಾರ್ಖಂಡ್ ರಾಜ್ಯದ ರಾಂಚಿ ಸ್ಟೇಷನ್ ಬಳಿಯ ನಿವಾಸಿ ಆಲಿಯಾ (16) ಅವರನ್ನು ನಗರದ ಜೆಪ್ಪಿನಮೊಗರು ಪ್ರಜ್ಞಾ ಸ್ವಾದಾರ ಕೇಂದ್ರದಲ್ಲಿ 2017ರ ಸೆಪ್ಟಂಬರ್ 12ರಂದು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬಾಲಕಿಯು 2017ರ ಸೆ.16ರಂದು ಬೆಳಗ್ಗೆ 7 ಗಂಟೆಗೆ ಕೇಂದ್ರದಿಂದ ಕಾಣೆಯಾಗಿದ್ದಳು. ಬಾಲಕಿಯನ್ನು ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆ ಅಪಹರಿಸಿರುವ ಸಾಧ್ಯತೆಯಿದೆ ಎಂದು ಪ್ರಜ್ಞಾ ಸ್ವಾದಾರ ಕೇಂದ್ರದ ಅಧೀಕ್ಷಕಿ ಶ್ವೇತಾ ವಿ. ನೀಡಿದ್ದ ದೂರಿನಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚಹರೆ: 4 ಅಡಿ ಎತ್ತರ, ಕೋಲಿ ಮುಖ, ಗೋದಿ ಮೈಬಣ್ಣ ಹೊಂದಿದ್ದು, ಗುಲಾಬಿ ಬಣ್ಣದ ಸಲ್ವಾರ್, ಗೋಲ್ಡನ್ ಬಣ್ಣದ ಲಂಗ ಧರಿಸಿದ್ದರು. ಕುತ್ತಿಗೆಯಲ್ಲಿ ಕಪ್ಪು ಬಣ್ಣದ ದಾರ ಇದೆ. ಹಿಂದಿ ಭಾಷೆ ಮಾತನಾಡುತ್ತಾರೆ.

3.ಕಂಕನಾಡಿ ನಗರ ಠಾಣೆ: ದಾವಣಗೆರೆ ಪೂಜಾ ಹೊಟೇಲ್ ಹಿಂಬದಿ ಜೋಪಡಿಯಲ್ಲಿ ವಾಸಿಸುವ ರಫೀಕ್ ಮತ್ತು ಶಂಶಾದ್ ದಂಪತಿಯ ಏಳು ತಿಂಗಳ ಮಗು ಮುಬಾರಕ್ ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ.

ಹಲವು ದಿನಗಳಿಂದ ಮಗುವಿನ ತಾಯಿ ಶಂಶಾದ್ ತನ್ನ ಮಕ್ಕಳಾದ ಮುಹಮ್ಮದ್ ಮತ್ತು ಮುಬಾರಕ್ ಜೊತೆ ಮಂಗಳೂರು ರೈಲು ನಿಲ್ದಾಣದಲ್ಲಿ ಬಂದು ಭಿಕ್ಷಾಟನೆ ಮಾಡಿಕೊಂಡು ನಿಲ್ದಾಣದಲ್ಲೇ ಉಳಿದುಕೊಂಡಿದ್ದಳು. 2017ರ ಜ. 12ರಂದು ರಾತ್ರಿ 7 ಗಂಟೆಗೆ ಮಗು ಮುಬಾರಕ್‌ನನ್ನು ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್ ಹತ್ತಿರ ಮಲಗಿಸಿ ಭಿಕ್ಷಾಟನೆ ಮಾಡಿ ಮಗುವನ್ನು ಮಲಗಿಸಿದ ಜಾಗಕ್ಕೆ ವಾಪಸಾದಾಗ ಮಗು ಕಾಣೆಯಾಗಿದೆ. ಅಕ್ಕಪಕ್ಕದಲ್ಲಿ ಹುಡುಕಾಡಿದರೂ ಮಗು ಪತ್ತೆಯಾಗಿಲ್ಲ. ಮಗುವನ್ನು ಅಪಹರಿಸಿರುವ ಬಗ್ಗೆ ಕಂಕನಾಡಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ: ದುಂಡು ಮುಖ, ಬಿಳಿ ಮೈಬಣ್ಣ ಹೊಂದಿದ್ದು, ಬಿಳಿ ಬನಿಯನ್, ನೀಲಿ ಚಡ್ಡಿ ಧರಿಸಿದ್ದು, ಸಣ್ಣ ಕೂದಲು ಇರುತ್ತದೆ.

ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳು ಇಲ್ಲಿಯವರೆಗೆ ಪತ್ತೆಯಾಗದ ಹಿನ್ನೆಲೆ ಈ ಪ್ರಕರಣಗಳ ಹೆಚ್ಚಿನ ತನಿಖೆಗಾಗಿ ಇಕೊನಾಮಿಕ್ ಆ್ಯಂಡ್ ನಾರ್ಕೊಟಿಕ್ಸ್ ಕ್ರೈಮ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

ನಾಪತ್ತೆ/ಅಪಹರಣಕ್ಕೊಳಗಾದ ಮಕ್ಕಳ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಲ್ಲಿ ಇಕೊನಾಮಿಕ್ ಆ್ಯಂಡ್ ನಾರ್ಕೊಟಿಕ್ಸ್ ಕ್ರೈಮ್ ಪೊಲೀಸ್ ಠಾಣೆ (0824-2290594/2220800 ಮೊ. 9480802340) ಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News