ಪ್ರಥಮ ಗಸ್ತು ತಿರುಗಾಟ ಪೂರೈಸಿದ ಐಎನ್‌ಎಸ್ ಅರಿಹಂತ್: ಪ್ರಧಾನಿ ಶ್ಲಾಘನೆ

Update: 2018-11-05 17:39 GMT

ಹೊಸದಿಲ್ಲಿ,ನ.5: ಭಾರತದ ಪ್ರಥಮ ಸ್ವದೇಶಿ ಪರಮಾಣು ಜಲಾಂತರ್ಗಾಮಿ ಐಎನ್‌ಎಸ್ ಅರಿಹಂತ್ ಸೋಮವಾರ ತನ್ನ ಮೊದಲ ಗಸ್ತು ತಿರುಗಾಟದಿಂದ ಮರಳಿದ್ದು ದೇಶದ ಪರಮಾಣು ಅಸ್ತ್ರಗಳ ಸಮೂಹವನ್ನು ಸಂಪೂರ್ಣಗೊಳಿಸಿದೆ. ಅರಿಹಂತ್‌ನ ಈ ಸಾಧನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಇದೊಂದು ಐತಿಹಾಸಿಕ ಕ್ಷಣವಾಗಿದೆ ಮತ್ತು ಪರಮಾಣು ಬೆದರಿಕೆ ಹಾಕುತ್ತಿರುವವರಿಗೆ ನೀಡಿದ ತೀಕ್ಷ್ಣ ಪ್ರತಿಕ್ರಿಯೆಯಾಗಿದೆ ಎಂದು ತಿಳಿಸಿದ್ದಾರೆ.

ಇದೊಂದು ಐತಿಹಾಸಿಕ ದಿನವಾಗಿದೆ, ಯಾಕೆಂದರೆ ಐಎನ್‌ಎಸ್ ಅರಿಹಂತ್ ಭಾರತದ ಪರಮಾಣು ಗುಂಪನ್ನು ಸಂಪೂರ್ಣಗೊಳಿಸಿದೆ. ಭಾರತದ ಪರಮಾಣು ಅಸ್ತ್ರಗಳು ಜಾಗತಿಕ ಶಾಂತಿ ಮತ್ತು ಸ್ಥಿರತೆಯ ಆಧಾರ ಸ್ತಂಭಗಳಾಗಲಿವೆ. ನಮ್ಮ ಪರಮಾಣು ಕಾರ್ಯಕ್ರಮಗಳನ್ನು ಜಾಗತಿಕ ಶಾಂತಿ ಮತ್ತು ಸ್ಥಿರತೆಗಾಗಿ ಭಾರತ ನಡೆಸುತ್ತಿರುವ ಪ್ರಯತ್ನದ ಭಾಗವೆಂದು ಪರಿಗಣಿಸಬೇಕು ಎಂದು ಪ್ರಧಾನಿ ತಿಳಿಸಿದ್ದಾರೆ.

ಐಎನ್‌ಎಸ್ ಅರಿಹಂತ್ (ಶತ್ರುಗಳ ವಿನಾಶಕ) ಅನ್ನು 2009ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಉಪಸ್ಥಿತಿಯಲ್ಲಿ ವಿಶಾಖಪಟ್ಣಂನ ಹಡಗು ನಿರ್ಮಾಣ ಕೇಂದ್ರದಲ್ಲಿ ದೇಶಕ್ಕೆ ಸಮರ್ಪಿಸಲಾಗಿತ್ತು. ರಶ್ಯಾ,ಚೀನಾ, ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕದ ನಂತರ ಪರಮಾಣು ಜಲಾಂತರ್ಗಮಿಯನ್ನು ಅಭಿವೃದ್ಧಿಪಡಿಸಿ ಕಾರ್ಯಾಚರಣೆಗಿಳಿಸಿದ ಹೆಗ್ಗಳಿಕೆ ಭಾರತದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News