ಹುಲಿ ಅವನಿ ಹತ್ಯೆಯ ಬಗ್ಗೆ ಮೇನಕಾ ಗಾಂಧಿಗೆ ಮಾಹಿತಿಯಿಲ್ಲ: ಮಹಾರಾಷ್ಟ್ರ ಸಚಿವ

Update: 2018-11-05 18:03 GMT

ಮುಂಬೈ,ನ.5: ಹೆಣ್ಣು ಹುಲಿ ಅವನಿಯನ್ನು ಹತ್ಯೆ ಮಾಡಿರುವ ಕಾರಣಕ್ಕೆ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಸಚಿವೆ, ತನ್ನದೇ ಪಕ್ಷದ ಮೇನಕಾ ಗಾಂಧಿ ಬಗ್ಗೆ ಅಸಮಾಧಾನ ತೋಡಿಕೊಂಡಿರುವ ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮುಂಗಂತಿವರ್, ಘಟನೆಯ ಬಗ್ಗೆ ಮೇನಕಾ ಗಾಂಧಿಗೆ ಸರಿಯಾದ ಮಾಹಿತಿಯಿಲ್ಲ. ಹಾಗಾಗಿ ಅವರು ಬೇಕಾದರೆ ಈ ವಿಷಯದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಬಹುದು ಎಂದು ಸೋಮವಾರ ತಿಳಿಸಿದ್ದಾರೆ.

ನರಭಕ್ಷಕ ಹೆಣ್ಣು ಹುಲಿ ಅವನಿಯನ್ನು ಮಹಾರಾಷ್ಟ ಅರಣ್ಯ ಇಲಾಖೆ ಯವತ್ಮಲ್ ಜಿಲ್ಲೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಿತ್ತು. ಟಿ1 ಎಂದು ಕರೆಯಲ್ಪಡುತ್ತಿದ್ದ ಆರು ವರ್ಷ ಪ್ರಾಯದ ಹುಲಿಗೆ ಎರಡು ಒಂಬತ್ತು ತಿಂಗಳು ಪ್ರಾಯದ ಮರಿಗಳಿವೆ. ಅವನಿ 2016ರಿಂದ ಯವತ್ಮಲ್‌ನ ರಾಲೆಗಾಂವ್ ಅರಣ್ಯ ಪ್ರದೇಶದಲ್ಲಿ 13 ಜನರನ್ನು ಬಲಿಪಡೆದುಕೊಂಡಿದೆ ಎಂದು ಹೇಳಲಾಗಿದೆ. ಅವನಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವುದು ಕಾನೂನುಬಾಹಿರ ಮತ್ತು ಅದೊಂದು ಭೀಕರ ಕೊಲೆ ಎಂದು ರವಿವಾರ ಟೀಕಿಸಿದ್ದ ಮೇನಕಾ ಗಾಂಧಿ, ಹುಲಿಯನ್ನು ಹತ್ಯೆಗೈಯ್ಯಲು ಆದೇಶ ನೀಡಿದ್ದ ಅರಣ್ಯ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಮುಂಗತಿವರ್, ಕೇಂದ್ರ ಸಚಿವೆಯ ಹೇಳಿಕೆಯು ಆಕೆಗೆ ಈ ಪ್ರಕರಣದ ಬಗ್ಗೆ ಸರಿಯಾದ ಮಾಹಿತಿಯಿಲ್ಲ ಎಂಬುದನ್ನು ಸೂಚಿಸುತ್ತದೆ. ನನಗಾಗಲೀ ಅಥವಾ ನನ್ನ ಕಾರ್ಯಾಲಯಕ್ಕಾಗಲೀ ಇಂಥ ಹತ್ಯೆಗಳನ್ನು ನಡೆಸಲು ಆದೇಶ ನೀಡುವ ಅಧಿಕಾರವಿಲ್ಲ. ಈ ನಿರ್ಧಾರವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸೂಚನೆಯಂತೆ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅವನಿ ಐದು ಮಂದಿಯನ್ನು ಬಲಿಪಡೆದಾಗ ಅದನ್ನು ಹಿಡಿಯಲು ಆದೇಶ ನೀಡಲಾಗಿತ್ತು. ಆದರೆ ಇದಕ್ಕೆ ಹೋರಾಟಗಾರರು ಬಾಂಬೆ ಉಚ್ಚ ನ್ಯಾಯಾಲಯದಿಂದ ತಡೆ ತಂದ ಪರಿಣಾಮ ನರಭಕ್ಷಕ ಹುಲಿ ನರ ಬಲಿಯನ್ನು ಪಡೆಯುತ್ತಲೇ ಸಾಗಿತು ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News