ಕೇಂದ್ರಕ್ಕೆ ರಿಸರ್ವ್ ಬ್ಯಾಂಕಿನ 3.6 ಲಕ್ಷ ಕೋಟಿ ರೂ. ಮೀಸಲು ನಿಧಿ ಬೇಕಂತೆ: ನೀಡಲ್ಲ ಎಂದ ಆರ್ ಬಿಐ

Update: 2018-11-06 05:53 GMT

ಹೊಸದಿಲ್ಲಿ, ನ.6: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರಕಾರದ ನಡುವಿನ ಜಟಾಪಟಿಗೆ ಮುಖ್ಯ ಕಾರಣ ವಿತ್ತ ಸಚಿವಾಲಯ ಇತ್ತೀಚೆಗೆ ಮುಂದಿಟ್ಟ ಪ್ರಸ್ತಾವನೆಯೊಂದು ಎಂದು ಹೇಳಲಾಗಿದೆ. ಈ ಪ್ರಸ್ತಾವನೆಯಂತೆ ಸಚಿವಾಲಯವು ಆರ್ ಬಿಐನ ಒಟ್ಟು ರೂ 9.59 ಲಕ್ಷ ಕೋಟಿ ಮೀಸಲು ನಿಧಿಯ ಮೂರನೇ ಒಂದಂಶಕ್ಕಿಂತಲೂ ಹೆಚ್ಚು, ಅಂದರೆ ರೂ 3.6 ಲಕ್ಷ ಕೋಟಿ ಮೀಸಲು ನಿಧಿಯನ್ನು ತನಗೆ ವರ್ಗಾಯಿಸಬೇಕೆಂದು ಕೋರಿದೆ. ಈ ಮೀಸಲು ನಿಧಿಯನ್ನು ಸರಕಾರ ಮತ್ತು ಆರ್ ಬಿಐ ಜಂಟಿಯಾಗಿ ನಿರ್ವಹಿಸಬಹುದು ಎಂಬುದು ಸರಕಾರದ ವಾದವಾಗಿದೆ.

ಆದರೆ ಸರಕಾರದ ಈ ಪ್ರಸ್ತಾವನೆ ಒಪ್ಪಿಕೊಂಡಿದ್ದೇ ಆದಲ್ಲಿ ಅದು ದೇಶದ ಆರ್ಥಿಕ ಸುಸ್ಥಿರತೆಗೆ ಗಂಭೀರ ಪರಿಣಾಮವುಂಟು ಮಾಡಬಹುದು ಎಂದು ಆರ್‍ಬಿಐ ತಿಳಿದುಕೊಂಡಿದೆಯೆನ್ನಲಾಗಿದ್ದು, ಇದೇ ಕಾರಣದಿಂದ ಅದು ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.

ರಿಸರ್ವ್ ಬ್ಯಾಂಕಿನ ಮೀಸಲು ನಿಧಿ ಬಳಕೆಗೆ ಸಂಬಂಧಿಸಿದ ಈಗಿನ ನಿಯಮಾವಳಿಗಳನ್ನು ಆರ್‍ ಬಿಐ ಏಕಪಕ್ಷೀಯವಾಗಿ ಜುಲೈ 2017ರಲ್ಲಿ  ಜಾರಿಗೆ ತಂದಿದೆ ಹಾಗೂ ಇದನ್ನು ಅನುಮೋದಿಸಿದ ಆರ್‍ ಬಿಐ ಮಂಡಳಿಯ ಸಭೆಯಲ್ಲಿ ಸರಕಾರದಿಂದ ನೇಮಕಗೊಂಡವರು ಹಾಜರಿರಲಿಲ್ಲದೇ ಇದ್ದುದರಿಂದ ಈ ನಿಯಮಾವಳಿಗೆ ಸರಕಾರ ಒಪ್ಪದೆ ಆರ್‍ ಬಿಐ ಜತೆ ಚರ್ಚೆ   ನಡೆಸಬೇಕೆಂದು ಹೇಳುತ್ತಿದೆ.

ಸರಕಾರದ ಪ್ರಕಾರ ರಿಸರ್ವ್ ಬ್ಯಾಂಕ್ ತನ್ನ ಮೀಸಲು ನಿಧಿ ಅಗತ್ಯತೆಗಳನ್ನು ಅಧಿಕವಾಗಿಯೇ ಅಂದಾಜಿಸಿದ್ದು  ಅದರ ಬಳಿ ರೂ 3.6 ಲಕ್ಷ ಕೋಟಿ ಹೆಚ್ಚುವರಿ ಮೀಸಲು ನಿಧಿzಯಿದೆ ಎಂದು ಹೇಳುತ್ತಿದೆ. ಇದೇ ಕಾರಣದಿಂದ ಈ ನಿಧಿಯನ್ನು ಸರಕಾರವು ತನಗೆ ನೀಡಲು ಹೇಳುತ್ತಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News