ಚುನಾವಣಾ ದೇಣಿಗೆಗಳು: 193 ಕೋಟಿ ರೂ.ಗಳಲ್ಲಿ ಶೇ.86ರಷ್ಟು ಪಾಲು ಬಿಜೆಪಿಗೆ!

Update: 2018-11-06 08:07 GMT

ಹೊಸದಿಲ್ಲಿ, ನ.6: ಆರ್ಥಿಕ ವರ್ಷ 2017-18ರಲ್ಲಿ ರಾಜಕೀಯ ಪಕ್ಷಗಳಿಗೆ ಬಂದ ದೇಣಿಗೆಗಳ ಪೈಕಿ ಬಿಜೆಪಿ ಶೇ.86ರಷ್ಟು ಸಿಂಹಪಾಲನ್ನು ತನ್ನದಾಗಿಸಿಕೊಂಡಿದೆ. ಈ ವರ್ಷದಲ್ಲಿ ಬಿಜೆಪಿ ಪಡೆದ ದೇಣಿಗೆ 167.8 ಕೋಟಿ ರೂ.ಗಳಷ್ಟಾಗಿದ್ದರೂ 2016-17 ಆರ್ಥಿಕ ವರ್ಷಕ್ಕೆ  (ರೂ 290.22 ಕೋಟಿ) ಹೋಲಿಸಿದಾಗ ಇದು ಕಡಿಮೆಯೇ ಆಗಿದೆ. 2017-18ರಲ್ಲಿ ರಾಜಕೀಯ ಪಕ್ಷಗಳು ಪಡೆದ ಒಟ್ಟು ದೇಣಿಗೆ ರೂ 193.78 ಕೋಟಿ ಆಗಿದೆ.

ಕಾಂಗ್ರೆಸ್ ಪಕ್ಷ ಇದೇ ಅವಧಿಯಲ್ಲಿ 12 ಕೋಟಿ ರೂ. ದೇಣಿಗೆ ಪಡೆದು ಮೂರನೇ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನ ರೂ 13 ಕೋಟಿ ದೇಣಿಗೆ ಪಡೆದ ಬಿಜು ಜನತಾ ದಳಕ್ಕೆ ಹೋಗಿದೆ. ಉಳಿದ ಮೊತ್ತ ಎನ್‍ಸಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳ ನಡುವೆ ಹಂಚಿ ಹೋಗಿದೆ.

ಈ ಹಿಂದೆ ಸತ್ಯ ಇಲೆಕ್ಟೋರಲ್ ಟ್ರಸ್ಟ್ ಎಂದು ಕರೆಯಲ್ಪಡುತ್ತಿದ್ದ ಪ್ರೂಡೆಂಟ್ ಇಲೆಕ್ಟೋರಲ್ ಟ್ರಸ್ಟ್ ಅತಿ ದೊಡ್ಡ ದೇಣಿಗೆದಾರನಾಗಿದ್ದು  ಬಿಜೆಪಿ, ಕಾಂಗ್ರೆಸ್ ಹಾಗೂ ಬಿಜೆಡಿಗೆ ಒಟ್ಟು ರೂ 169.3 ಕೋಟಿ ದೇಣಿಗೆ ನೀಡಿದೆ.

ಈ ಪೈಕಿ ಬಿಜೆಪಿಗೆ 154.3 ಕೋಟಿ ರೂ. ಹೋಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ 10 ಕೋಟಿ ರೂ. ಹಾಗೂ ಬಿಜೆಡಿಗೆ 5 ಕೋಟಿ ರೂ. ಹೋಗಿದೆ. 2016-17ರಲ್ಲಿ ಈ ಟ್ರಸ್ಟ್  ರೂ 283.72 ಕೋಟಿ ದೇಣಿಗೆ ವಿತರಿಸಿದ್ದು ಇದರ ಪೈಕಿ ಶೇ 89ರಷ್ಟು ಅಂದರೆ ರೂ 252 ಕೋಟಿ ದೇಣಿಗೆಯನ್ನು ಬಿಜೆಪಿ ಪಡೆದಿದ್ದರೆ ಕಾಂಗ್ರೆಸ್ ಪಕ್ಷ 14.9 ಕೋಟಿ  ಪಡೆದಿತ್ತು. ಉಳಿದ ಹಣ ಶಿರೋಮಣಿ ಅಕಾಲಿ ದಳ್, ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕ ದಳ್ ಹಾಗು ಎಎಪಿ ನಡುವೆ ಹಂಚಿಕೆಯಾಗಿತ್ತು.

ಆರ್ಥಿಕ ವರ್ಷ 2017-18ರಲ್ಲಿ ಅಕ್ಟೋಬರ್ 15ರ ತನಕ ಎ.ಬಿ. ಜನರಲ್ ಇಲೆಕ್ಟೋರಲ್ ಟ್ರಸ್ಟ್ ರಾಜಕೀಯ ಪಕ್ಷಗಳ ನಡುವೆ ರೂ 21.5 ಕೋಟಿ ವಿತರಿಸಿದ್ದು, ಟ್ರಯಂಪ್ ಎಲೆಕ್ಟೋರಲ್ ಟ್ರಸ್ಟ್ ರೂ 2 ಕೋಟಿ, ಜನಕಲ್ಯಾಣ್ ಟ್ರಸ್ಟ್ ರೂ. 50 ಲಕ್ಷ ಎನ್‍ಸಿಪಿಗೆ ಹಾಗೂ ಜನಶಕ್ತಿ ಇಲೆಕ್ಟೋರಲ್ ಟ್ರಸ್ಟ್ ರೂ 48 ಲಕ್ಷ ಹಣವನ್ನು ನ್ಯಾಷನಲ್ ಕಾನ್ಫರೆನ್ಸ್ ಗೆ ನೀಡಿದೆ.

ದೇಣಿಗೆ ನೀಡುವ ಟ್ರಸ್ಟ್ ಗಳ ಹೆಸರು ಅವುಗಳನ್ನು ಸ್ಥಾಪಿಸಿದ ಕಂಪೆನಿಗಳ ಹೆಸರನ್ನು ಸೂಚಿಸುವುದಿಲ್ಲ. ಪ್ರೂಡೆಂಟ್ ಟ್ರಸ್ಟ್‍ಗೆ ಭಾರತಿ ಏರ್‍ಟೆಲ್  ಟೊರ್ರೆಂಟ್ ಫಾರ್ಮಾ ಹಾಗೂ  ಡಿಎಲ್‍ಎಫ್ ಗ್ರೂಪ್ ಇದ್ದರೆ, ಎ ಬಿ ಜನರಲ್ ಇಲೆಕ್ಟೋರಲ್ ಟ್ರಸ್ಟ್‍ಗೆ ಅಲ್ಟ್ರಾ ಟೆಕ್ ಸಿಮೆಂಟ್, ಹಿಂಡಾಲ್ಕೊ ಹಾಗೂ ಗ್ರಾಸಿಂ ಸಂಸ್ಥೆಗಳು ದೇಣಿಗೆ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News