ಉಪಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಗೆಲುವು: ದ.ಕ.ಜಿಲ್ಲಾ ಜೆಡಿಎಸ್ ಸಂಭ್ರಮಾಚರಣೆ
ಮಂಗಳೂರು, ನ.6: ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಉಪಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು ಲಭಿಸಿದ ಹಿನ್ನೆಲೆಯಲ್ಲಿ ಮಂಗಳವಾರ ದ.ಕ.ಜಿಲ್ಲಾ ಜೆಡಿಎಸ್ ಕಚೇರಿಯ ಮುಂದೆ ಸಂಭ್ರಮ ಆಚರಿಸಲಾಯಿತು.
ಪಕ್ಷದ ಮುಖಂಡರು, ಕಾರ್ಯಕರ್ತರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹಿತ ಹಿರಿಯ ನಾಯಕರ ಪರ ಘೋಷಣೆ ಕೂಗಿದರಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭ ಮಾತನಾಡಿದ ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ವಸಂತ ಪೂಜಾರಿ ‘ಗೆದ್ದೇ ಗೆಲ್ಲುವೆವು, ಸಮ್ಮಿಶ್ರ ಸರಕಾರ ಉರುಳಿಸುವೆವು ಎಂದು ಬೀಗುತ್ತಿದ್ದ ಬಿಜೆಪಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಇನ್ನು ಮುಂದೆ ಬಿಜೆಪಿಯ ಆಟ ನಡೆಯುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ನೆಲಕ್ಕಚ್ಚಲಿವೆ. ಅಲ್ಲದೆ ಜೆಡಿಎಸ್-ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದರು.
ಕಾರ್ಪೊರೇಟರ್ ರಮೀಝಾ ನಾಸರ್, ಪಕ್ಷದ ಮುಖಂಡರಾದ ಸುಶೀಲ್ ನೊರೊನ್ಹಾ, ಸುಮತಿ ಹೆಗ್ಡೆ, ರಾಮ್‌ಗಣೇಶ್, ರತ್ನಾಕರ ಸುವರ್ಣ, ಮುನೀರ್ ಮುಕ್ಕಚೇರಿ, ಗೋಪಾಲಕೃಷ್ಣ ಅತ್ತಾವರ, ಸಾಲಿ ಮರವೂರು, ಪ್ರಕಾಶ್ ಗೋಮ್ಸ್, ಎನ್.ಪಿ. ಪುಷ್ಪರಾಜನ್, ಮಧುಸೂದನ ಗೌಡ, ಚೂಡಾಮಣಿ, ಶಾಲಿನಿ, ಲತೀಫ್ ವಳಚ್ಚಿಲ್ ಮತ್ತಿತರರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.