ಕರ್ನಾಟಕ ಉಪ ಚುನಾವಣೆಯ ಫಲಿತಾಂಶ :ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಕೂಟ ಮೇಲುಗೈ

Update: 2018-11-07 14:59 GMT

ಬೆಂಗಳೂರು, ನ.6: ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ಆಡಳಿತರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಹುಮ್ಮಸ್ಸು ಮೂಡಿಸಿದ್ದು, ಪ್ರತಿಪಕ್ಷ ಬಿಜೆಪಿ ಪಾಳಯದಲ್ಲಿ ಮಾತ್ರ ನಿರಾಶೆಯ ಕಾರ್ಮೋಡ ಕವಿದಂತೆ ಮಾಡಿದೆ.

ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿಸಲ್ಪಟ್ಟಿದ್ದ ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಪೈಕಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಸಂಘಟಿತ ರಣತಂತ್ರದ ಪರಿಣಾಮ ಬಿಜೆಪಿಯು ಬಳ್ಳಾರಿ ಕ್ಷೇತ್ರವನ್ನು ಕಳೆದುಕೊಂಡಿತು. ಶಿವಮೊಗ್ಗದಲ್ಲಿಯೂ ಬಿಜೆಪಿ ಹಾಗೂ ಮೈತ್ರಿಗಳ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟು ಅಂತಿಮವಾಗಿ ಬಿಜೆಪಿ ಅಲ್ಲಿ ಮಾತ್ರ ಪ್ರಯಾಸದ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.

ಇನ್ನುಳಿದಂತೆ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ರಾಮನಗರದಲ್ಲಿ 1,09,137 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ- 5,43,306 ಮತಗಳು. ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ-4,91,158 ಮತಗಳು, ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್-8713 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿ ಶಶಿಕುಮಾರ್-17,189 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. 10,687 ನೋಟಾ ಮತಗಳು ಚಲಾವಣೆಯಾಗಿದ್ದವು.

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ 52,148 ಮತಗಳ ಅಂತರದಿಂದ ಜಯಶಾಲಿ ಯಾದರು.

ಬಳ್ಳಾರಿ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ- 6,28,365 ಮತಗಳು. ಬಿಜೆಪಿ ಅಭ್ಯರ್ಥಿ ಜೆ.ಶಾಂತಾ-3,85,204 ಮತಗಳು. ಪಕ್ಷೇತರ ಅಭ್ಯರ್ಥಿಗಳಾದ ವೈ.ಪಂಪಾಪತಿ-7697, ಡಾ.ಶ್ರೀನಿವಾಸ್-13,714 ಮತಗಳು ಪಡೆದಿದ್ದು, 12,413 ನೋಟಾ ಮತಗಳು ಚಲಾವಣೆಯಾಗಿದ್ದವು.

ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ವಿರುದ್ಧ 2,43,161 ಮತಗಳ ದಾಖಲೆಯ ಅಂತರದಿಂದ ಗೆಲುವಿನ ನಗೆ ಬೀರಿದರು.

ಮಂಡ್ಯ ಲೋಕಸಭಾ ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ-5,69,347 ಮತಗಳು. ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ-2,44,404 ಮತಗಳು. ಪಕ್ಷೇತರ ಅಭ್ಯರ್ಥಿಗಳಾದ ಕೌಡ್ಲೇ ಚನ್ನಪ್ಪ-9094 ಮತಗಳು, ಬಿ.ಎಸ್.ಗೌಡ-4086 ಮತಗಳು, ಜಿ.ಬಿ.ನವೀನ್‌ಕುಮಾರ್-15,307 ಮತಗಳು, ನಂದೀಶ್-4064 ಮತಗಳು, ಕೆ.ಎಸ್.ರಾಜಣ್ಣ-7421 ಮತಗಳು, ಶಂಭುಲಿಂಗೇಗೌಡ(ಗಾಂಧೀವಾಧಿ)-5483 ಮತಗಳು, ಎಂ.ಹೊನ್ನೇಗೌಡ-17,842 ಮತಗಳು ಪಡೆದಿದ್ದು, 15,480 ನೋಟಾ ಮತಗಳು ಚಲಾವಣೆಯಾಗಿದ್ದವು.

ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಡಾ.ಸಿದ್ದರಾಮಯ್ಯ ವಿರುದ್ಧ 3,24,943 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸಾಮಿ-1,25,043 ಮತಗಳು, ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್- 15,906 ಮತಗಳು, ಪೂರ್ವಾಂಚಲ್ ಮಹಾಪಂಚಾಯತ್ ಅಭ್ಯರ್ಥಿ ಎಚ್.ಡಿ. ರೇವಣ್ಣ-2231 ಮತಗಳು, ಪಕ್ಷೇತರ ಅಭ್ಯರ್ಥಿಗಳಾದ ಕುಮಾರ ನಾಯ್ಕ-520 ಮತಗಳು, ಡಿ.ಎಂ.ಮಾದೇಗೌಡ-536 ಮತಗಳು, ಮುನಿಯಪ್ಪ- 478 ಮತಗಳು, ಸುರೇಂದ್ರ ರಾಮನಗರ-545 ಮತಗಳನ್ನು ಪಡೆದಿದ್ದು, 2909 ನೋಟಾ ಮತಗಳು ಚಲಾವಣೆಯಾಗಿದ್ದವು.

ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎಲ್.ಚಂದ್ರಶೇಖರ್(ಕಣದಿಂದ ಹಿಂದೆ ಸರಿದಿದ್ದ) ವಿರುದ್ಧ 1,09,137 ಮತಗಳ ಅಂತರದಿಂದ ದಾಖಲೆಯ ಗೆಲುವು ಸಾಧಿಸಿದ್ದಾರೆ.

ಜಮಖಂಡಿ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಆನಂದ ಸಿದ್ದು ನ್ಯಾಮಗೌಡ-97017 ಮತಗಳು, ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ-57537 ಮತಗಳು, ಪ್ರಜಾಪರಿವರ್ತನ ಪಾರ್ಟಿ ಅಭ್ಯರ್ಥಿ ಪರಶುರಾಮ ಮಹಾರಾಜನವರ-731 ಮತಗಳು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಯಮನಪ್ಪ ಗುಣದಾಳ-178 ಮತಗಳು, ಪಕ್ಷೇತರ ಅಭ್ಯರ್ಥಿಗಳಾದ ಆಂಬ್ರೋಸ್ ಡಿ’ಮೆಲ್ಲೋ-237 ಮತಗಳು, ರವಿಶಿವಪ್ಪ ಪಡಸಲಗಿ-219 ಮತಗಳು, ಸಂಗಮೇಶ ಚಿಕ್ಕನರಗುಂದ-373 ಮತಗಳು ಪಡೆದಿದ್ದು, 724 ನೋಟಾ ಮತಗಳು ಚಲಾವಣೆಯಾಗಿದ್ದವು.

ಕಾಂಗ್ರೆಸ್ ಅಭ್ಯರ್ಥಿ ಆನಂದ ಸಿದ್ದುನ್ಯಾಮಗೌಡ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ವಿರುದ್ಧ 39,480 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News