ಮಂಗಳೂರು: ಕ್ಯಾಂಪಸ್ ಫ್ರಂಟ್ ವತಿಯಿಂದ ಸಂಸ್ಥಾಪನಾ ದಿನಾಚರಣೆ
ಮಂಗಳೂರು, ನ. 7: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಕ್ಯಾಂಪಸ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಮ್ರಾನ್ ಪಿ.ಜೆ. ಧ್ವಜಾರೋಹಣಗೈದು ಮಾತನಾಡಿದರು.
ರಾಜ್ಯ ಕಾರ್ಯದರ್ಶಿ ಸದಕತುಲ್ಲಾ ಮಾತನಾಡಿ, ದೇಶದಲ್ಲಿ ಉದ್ಭವಿಸಿದ ಹಲವಾರು ಸಾಮಾಜಿಕ ಪ್ರಶ್ನೆಗಳಿಗೆ ಉತ್ತರ ನೀಡಲು ಕ್ಯಾಂಪಸ್ ಫ್ರಂಟ್ ಹುಟ್ಟಿ ಕೊಂಡಿದೆ. ಸಾಮಾಜಿಕ ಬದಲಾವಣೆಗಾಗಿ ವಿದ್ಯಾರ್ಥಿಗಳು ಎಂಬ ಘೋಷವಾಕ್ಯದೊಂದಿಗೆ ಕೇವಲ ಪಠ್ಯದ ವಿಷಯಗಳಿಗೆ ಮಾತ್ರ ಸೀಮಿತವಾದ ವಿದ್ಯಾರ್ಥಿ ಗಳಲ್ಲಿ ಸಾಮಾಜಿಕ ಕಳಕಳಿಯನ್ನು ಉಂಟು ಮಾಡಲು ಕ್ಯಾಂಪಸ್ ಫ್ರಂಟ್ ಗೆ ಸಾಧ್ಯವಾಗಿದೆ. ಹತ್ತನೇ ವರ್ಷಕ್ಕೆ ಹೆಜ್ಜೆ ಇಟ್ಟ ನಾವೆಲ್ಲರೂ ಪ್ರಸಕ್ತ ದೇಶದ ಸ್ಥಿತಿಗತಿಗಳನ್ನು ನೋಡುವಾಗ ಮುಂಬರುವ ದಿನಗಳಲ್ಲಿ ನಮ್ಮೆಲ್ಲರ ಜವಾಬ್ದಾರಿಗಳು ಹೆಚ್ಚಾಗಲಿದ್ದು, ಕಾರ್ಯಕರ್ತರೆಲ್ಲರೂ ದೇಶವನ್ನು ಫ್ಯಾಶಿಷ್ಟ್ ಹಿತಾಸಕ್ತಿಗಳಿಂದ ರಕ್ಷಿಸಲು ಸದಾ ಸನ್ನದ್ಧರಾಗಿರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಅಶ್ವಾನ್ ಸಾದಿಕ್, ದ.ಕ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಅಫ್ರೀದ್, ಕ್ಯಾಂಪಸ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಸಾದಿಕ್, ಮಂಗಳೂರು ತಾಲುಕು ಅಧ್ಯಕ್ಷರಾದ ಸಿರಾಜ್ ಮುಂತಾದವರು ಉಪಸ್ಥಿತರಿದ್ದರು.
ದಿನಾಚರಣೆಯ ಪ್ರಯುಕ್ತ ಜಿಲ್ಲಾ ಸಮಿತಿಯು ಮಂಗಳೂರಿನ ಟ್ರಾನ್ಸಿಟ್ ಮಕ್ಕಳ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಸಿಹಿ ತಿಂಗಳನ್ನು ಹಂಚಲಾಯಿತು. ಅದೇ ರೀತಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಹಾಗು ಶಾಲಾ ಕಾಲೇಜುಗಳಲ್ಲಿ ಕ್ಯಾಂಪಸ್ ಫ್ರಂಟ್ ದಿನವನ್ನು ದ್ವಜಾರೋಹಣ, ಸಾರ್ವಜನಿಕ ಕಾರ್ಯಕ್ರಮ, ಕ್ರೀಡಾಕೂಟ, ಸ್ನೇಹ ಸಮ್ಮಿಲನ ಮುಂತಾದ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು.