ಸರಕಾರ ನಿಗದಿಪಡಿಸಿದ ಕನಿಷ್ಠ ಕೂಲಿ ನೀಡದ ಮಾಲಕರು: ರಾತ್ರಿ-ಹಗಲು ಧರಣಿ 5ನೇ ದಿನಕ್ಕೆ
ಮಂಗಳೂರು, ನ. 7: ಕರ್ನಾಟಕ ರಾಜ್ಯ ಸರಕಾರವು ನಿಗದಿಪಡಿಸಿದ ಕನಿಷ್ಠ ಕೂಲಿಯು ಕಳೆದ ಎ. 1 ರಿಂದ ಜಾರಿಗೊಳ್ಳಬೇಕಾಗಿದ್ದು,ಅದನ್ನು ನೀಡದೆ ಸತಾಯಿಸುತ್ತಿರುವ ಶಕ್ತಿನಗರದ ಕ್ಯಾಶ್ಯೂ ಮಾಲಕರ ದುರ್ನಡತೆಯನ್ನು ಖಂಡಿಸಿ, ಅಲ್ಲಿನ ಕಾರ್ಮಿಕರು ಸಿಐಟಿಯು ಹಾಗೂ ಬಿಎಂಎಸ್ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ನಡೆಸುತ್ತಿರುವ ರಾತ್ರಿ ಹಗಲು ಧರಣಿ ಸತ್ಯಾಗ್ರಹವು ಇಂದು 5 ದಿನವನ್ನು ಪೂರೈಸಿದೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ , ರಾಜ್ಯ ಸರಕಾರವು ನಿಗದಿಪಡಿಸಿದ ಕನಿಷ್ಠ ಕೂಲಿಯನ್ನು ನೀಡದೆ ವಂಚಿಸುತ್ತಿರುವ ಮಾಲಕ ವರ್ಗದ ಧೋರಣೆ ತೀರಾ ಖಂಡನೀಯ. ಕಳೆದ 7 ತಿಂಗಳಿನಿಂದ ಮಾಲಕರು ಈ ರೀತಿಯ ಬೇಜವಾಬ್ದಾರಿಯನ್ನು ತೋರಿಸುತ್ತಿದ್ದರೂ, ಜಿಲ್ಲಾಡಳಿತವಾಗಲೀ, ಕಾರ್ಮಿಕ ಇಲಾಖೆಯಾಗಲೀ ಸ್ಪಂದಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ಧರಣಿನಿರತ ಸ್ಥಳಕ್ಕೆ ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿ,ಬಿಎಮ್ ಎಸ್ ಜಿಲ್ಲಾ ನಾಯಕರಾದ ಗೋಪಾಲಕ್ರಷ್ಣ, ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಯು.ಬಿ.ಲೋಕಯ್ಯರವರು ಭೇಟಿ ನೀಡಿ, ಕಳೆದ ಹಲವು ದಿನಗಳಿಂದ ಹೋರಾಟ ನಿರತ ಕಾರ್ಮಿಕರಿಗೆ ಸ್ಪೂರ್ತಿ ನೀಡಿದರು.
ಹೋರಾಟದ ನೇತ್ರತ್ವವನ್ನು ಸಿಐಟಿಯು ಜಿಲ್ಲಾ ನಾಯಕರಾದ ಬಾಬು ದೇವಾಡಿಗ, ಕ್ಯಾಶ್ಯೂ ಕಾರ್ಮಿಕರ ಸಂಘಟನೆಗಳ ಮುಖಂಡರಾದ ಮೀನಾಕ್ಷಿ, ಶಶಿಕಲ, ಸುಂದರಿ, ಶೋಭಾ, ಮಾಲತಿ, ರೋಹಿಣಿ, ಸದಾಶಿವ, ವಸಂತ ಮುಂತಾದವರು ವಹಿಸಿದ್ದರು.