ಡಿ.1ರಿಂದ ಮನಪಾ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಕಾರ್ಡ್ ಕಡ್ಡಾಯ: ಜಿಲ್ಲಾಧಿಕಾರಿ

Update: 2018-11-07 10:59 GMT

ಮಂಗಳೂರು, ನ.7: ರಾಜ್ಯ ಸರಕಾರದ ಅಧಿಸೂಚನೆಯಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡಿ.1ರಿಂದ ಅನ್ವಯವಾಗುವಂತೆ ಪ್ರಾಪರ್ಟಿ ಕಾರ್ಡ್ (ಅರ್ಬನ್ ಪ್ರಾಪರ್ಟಿ ಓನರ್‌ಶಿಪ್ ರೆಕಾರ್ಡ್ಸ್-ಪಿಆರ್ ಕಾರ್ಡ್) ಕಡ್ಡಾಯಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಪಾ ವ್ಯಾಪ್ತಿಯಲ್ಲಿ ಬರುವ 32 ಕಂದಾಯ ಗ್ರಾಮಗಳನ್ನು 6 ವಲಯಗಳನ್ನಾಗಿ ಮತ್ತು 30 ಸೆಕ್ಟರ್‌ಗಳನ್ನಾಗಿ ವಿಂಗಡಿಸಲಾಗಿದೆ. ಅದರೊಳಗಡೆ ಬರುವ ಸುಮಾರು 1,50,635 ಆಸ್ತಿಗಳ ಅಳತೆ ಕಾರ್ಯವನ್ನು ಈಗಾಗಲೆ ನಡೆಸಲಾಗಿದೆ ಎಂದರು.

ಆ ಪೈಕಿ 77,306 ಆಸ್ತಿಗಳ ದಾಖಲೆಗಳನ್ನು ಸಂಗ್ರಹಿಸಲಾಗಿದೆ. 31,883 ಆಸ್ತಿಗಳ ಕರಡು ಪಿಆರ್ ಕಾರ್ಡ್‌ಗಳನ್ನು ಮಾಡಲಾಗಿದೆ. 26,393 ಆಸ್ತಿಗಳ ಕರಡು ಪಿಆರ್ ಕಾರ್ಡ್‌ಗಳನ್ನು ನೀಡಲಾಗಿದೆ. 23,569 ಆಸ್ತಿಗಳ ಪಿಆರ್ ಕಾರ್ಡ್‌ಗಳಿಗೆ ಅನುಮೋದನೆ ನೀಡಲಾಗಿದೆ. 18,491 ಪಿಆರ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಈ ಯೋಜನೆಯು 2012ರಿಂದ ಆರಂಭಗೊಂಡಿದೆ. ಆಸ್ತಿಗಳಿಗೆ ಸಂಬಂಧಿಸಿ ಎಲ್ಲಾ ದಾಸ್ತಾವೇಜು/ದಾಖಲೆಗಳನ್ನು ಯುಪಿಒಆರ್ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಸಂಗ್ರಹಿಸಿ ಡಾಟಾ ಎಂಟ್ರಿ ಕಾರ್ಯ ಮಾಡಲಾಗುತ್ತದೆ. ಈ ಎಲ್ಲಾ ದಾಖಲೆಗಳ ಬಗ್ಗೆ ಹಕ್ಕು ವಿಚಾರಣಾ ಪ್ರಕ್ರಿಯೆಯ ಬಳಿಕ 30 ದಿನಗಳೊಳಗೆ ನಿಗದಿತ ಶುಲ್ಕ ವಸೂಲಿ ಮಾಡಿ ಪಿಆರ್ ಕಾರ್ಡ್ ನೀಡಲಾಗುತ್ತದೆ. ಕರಡು ಪಿಆರ್ ಕಾರ್ಡ್ ಬಗ್ಗೆ ಆಕ್ಷೇಪಗಳಿದ್ದರೆ ಸೂಕ್ತ ದಾಖಲೆಯೊಂದಿಗೆ ಸಲ್ಲಿಸಬಹುದು. ಪಿಆರ್ ಕಾರ್ಡ್ ಪ್ರಮಾಣಪತ್ರ ಅಂತಿಮಗೊಂಡ ಬಳಿಕ ಯುಪಿಒಆರ್ ತಂತ್ರಾಂಶವು ಕಾವೇರಿ ತಂತ್ರಾಂಶದೊಂದಿಗೆ ಸಂಯೋಜನೆಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಪಿಆರ್ ಕಾರ್ಡ್ ಪ್ರಮಾಣಪತ್ರವು ನೋಂದಣಿಗೆ ಕಡ್ಡಾಯವಾಗಿರುವುದರಿಂದ ಪಿಆರ್ ಕಾರ್ಡ್ ಮಾಡಿಸದವರು ಶೀಘ್ರ ಇದನ್ನು ಮಾಡಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಮಂಗಳೂರು ತಾಲೂಕು ಕಚೇರಿ ಬಳಿ ಇದಕ್ಕಾಗಿ ಕಚೇರಿಯನ್ನು ತೆರೆಯಲಾಗಿದೆ. 8 ಹಳೆಯ ಸರ್ವೆಯರ್‌ಗಳಲ್ಲದೆ 12 ಹೊಸ ಸರ್ವೆಯರ್‌ಗಳನ್ನು ನೇಮಕ ಮಾಡಲಾಗಿದೆ. ಅಲ್ಲದೆ ಹೆಚ್ಚುವರಿ ಐವರು ಸರ್ವೆಯರ್‌ಗಳನ್ನು ನಿಯುಕ್ತಿಗೊಳಿಸಲಾಗುವುದು. 10 ಡಾಟಾ ಎಂಟ್ರಿ ಸಹಿತ ಒಟ್ಟು 60 ಮಂದಿ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಪಿಆರ್ ಕಾರ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ತನ್ನ ಅಧ್ಯಕ್ಷತೆಯ ಸಮಿತಿಯು ವಾರಕ್ಕೆ ಎರಡು ಬಾರಿ ಸಭೆ ನಡೆಸಲಿದೆ.

*ಹೊಸ ವೆಬ್‌ಸೈಟ್: ಇದಕ್ಕಾಗಿಯೇ ನ.12ರಿಂದ ಹೊಸ ವೆಬ್‌ಸೈಟ್ ಕಾರ್ಯಾಚರಿಸಲಿದೆ. ಪೂರಕ ಮಾಹಿತಿ ಸಹಿತ ಇದರಲ್ಲಿ ಎಲ್ಲವನ್ನೂ ದಾಖಲಿಸಲಾಗುತ್ತದೆ. ಅಲ್ಲದೆ ಹೆಲ್ಪ್‌ಲೈನ್ ವಿಭಾಗವನ್ನೂ ತೆರೆಯಲಾಗುತ್ತದೆ. ಇಮೇಲ್ ಮಾಡಿಯೂ ಆಸ್ತಿ ನೋಂದಣಿ ಮಾಡಿಸಬಹುದಾಗಿದೆ. ಅದಕ್ಕಾಗಿಯೇ ಹೊಸ ಆ್ಯಪ್ ನಿರ್ಮಿಸಲಾಗುತ್ತದೆ. ಮನೆಯಿಂದ ಹೊರ ಹೋಗಲು ಅಸಾಧ್ಯವಿದ್ದವರಿಗೆ ಮಾತ್ರ ಸ್ಥಳಕ್ಕೆ ತೆರಳಿ ಸೇವೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News