×
Ad

ಮೆಲ್ವಿನ್ ಪೆರಿಸ್ ಸೆಂಟಿಮೆಂಟಲ್ ನೈಟ್ ಕಾರ್ಯಕ್ರಮದಿಂದ ಕ್ಯಾನ್ಸರ್ ನಿಧಿಗೆ 45 ಲಕ್ಷ ರೂ. ನೆರವು

Update: 2018-11-07 16:50 IST

ಮಂಗಳೂರು, ನ.7: ಕೊಂಕಣಿಯ ‘ಯೊಡ್ಲಿಂಗ್ ಕಿಂಗ್’ ಎಂದೇ ಚಿರಪರಿಚಿತರಾಗಿರುವ ಮೆಲ್ವಿನ್ ಪೆರಿಸ್ ಅವರ ಚೊಚ್ಚಲ ‘ಮೆಲ್ವಿನ್ ಪೆರಿಸ್ ಸೆಂಟಿಮೆಂಟಲ್ ನೈಟ್ ಸಂಗೀತ ಕಾರ್ಯಕ್ರಮ ರವಿವಾರ ನಗರದ ಪಂಪ್‌ವೆಲ್‌ನಲ್ಲಿರುವ ‘ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಿತು.

‘ಎಫ್‌ಎಂಸಿಐ ಕ್ಯಾನ್ ಸರ್‌ವೈವ್ ಕ್ಯಾನ್ಸರ್ ನಿಧಿಗೆ ಹಣ ಸಂಗ್ರಹಿಸುವುದಕ್ಕಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮೆಲ್ವಿನ್ ಪೆರಿಸ್ 40 ಲಕ್ಷ ರೂ.ನ ಚೆಕ್ಕನ್ನು ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ವಂ.ರಿಚರ್ಡ್ ಕುವೆಲ್ಲೊರವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದ ಖರ್ಚುವೆಚ್ಚವನ್ನು ಹೊರತುಪಡಿಸಿ ಬಾಕಿ ಉಳಿದ 5 ಲಕ್ಷ ರೂ.ನ್ನು ಕೂಡಾ ಇದೇ ನಿಧಿಗೆ ಹಸ್ತಾಂತರಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಅ.ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ ಮಾತನಾಡಿ, ದಯೆಯಿಲ್ಲದ ಧರ್ಮವಿಲ್ಲ. ನಿರ್ಗತಿಕರ, ರೋಗಿಗಳ, ದೀನ ದಲಿತರ ಮೇಲೆ ಕರುಣೆ ತೋರದವರು ಮಾತ್ರ ಮಾನವತಾವಾದಿಗಳಾಗಬಲ್ಲರು. ಖ್ಯಾತ ಗಾಯಕ ಮೆಲ್ವಿನ್ ಕಡು ಬಡತನದಲ್ಲಿರುವ ಕ್ಯಾನ್ಸರ್ ರೋಗಿಗಳ ನೆರವಿಗೆ 40 ಲಕ್ಷ ರೂ. ದೇಣಿಗೆ ಕ್ರೋಡೀಕರಿಸಿ ನೀಡುವುದರ ಮೂಲಕ ದಯಾಪರ ಕಾರ್ಯವೆಸಗಿದ್ದಾರೆ. ಅವರು ನಿಜವಾಗಿಯೂ ಉತ್ತಮ ಮಾನವತಾವಾದಿ ಎಂದರು.

ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ.ಅಜಿತ್ ಮಿನೇಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಮೆಲ್ವಿನ್ ಪೆರಿಸ್‌ರವರ 57 ಕೊಂಕಣಿ ಹಾಡುಗಳಿರುವ ‘ಅಭಿಮಾನ್ ಎಂಬ ಕೊಂಕಣಿ ಸಂಗೀತ ಆಲ್ಬಮ್ ಅನ್ನು ಬಿಡುಗಡೆಗೊಂಡಿತು. ಜೊತೆಗೆ ಹೆರೊಲ್ಪಿ ಯುಸ್ ಬರೆದ ಪುಸ್ತಕವು ಲೋಕಾರ್ಪಣೆಗೊಂಡಿತು.

ಮಂಗಳೂರಿನ ಹೆಸರಾಂತ ಗಾಯಕ-ಗಾಯಕಿಯರು ಸಂಗೀತ ಪ್ರೇಮಿಗಳ ಮನಸೂರೆಗೊಳಿಸಿದರು. ಕೊಂಕಣಿಯ ‘ಸಂಗೀತ ಗುರು’ ಎಂದೇ ಖ್ಯಾತರಾದ ಜೊಯೆಲ್ ಪಿರೇರ, ಬಿಜೈ ನಿರ್ದೇಶಿಸಿದ ಈ ಸಂಗೀತ ರಸಸಂಜೆಯನ್ನು ಜೆರಿ ರಸ್ಕಿನ್ಹಾ, ಟೈಟಸ್ ನೊರೊನ್ಹಾ ಮತ್ತು ಲೆಸ್ಲಿ ರೇಗೊ ನಡೆಸಿಕೊಟ್ಟರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News