×
Ad

ಪಡುಬಿದ್ರೆಯ ಮಹಿಳೆಗೆ ಮೊಬೈಲ್‌ನಲ್ಲಿ ಕಿರುಕುಳ: ಸಾರ್ವಜನಿಕವಾಗಿ ಪ್ರಶ್ನಿಸಿದಾಗ ಕುಸಿದು ಮೃತಪಟ್ಟ ಆರೋಪಿ

Update: 2018-11-07 17:21 IST

 ಪಡುಬಿದ್ರೆ, ನ.7: ಮೊಬೈಲ್ ಫೋನ್ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಮಹಿಳೆಯೊಬ್ಬಳು ಸಾರ್ವಜನಿಕವಾಗಿ ಪ್ರಶ್ನಿಸಿದಾಗ ಆತ ಕುಸಿದು ಮೃತಪಟ್ಟ ಘಟನೆ ಪಡುಬಿದ್ರೆಯ ಬಸ್ ನಿಲ್ದಾಣದಲ್ಲಿಂದು ನಡೆದಿದೆ.

ಮೃತರನ್ನು ಮುಲ್ಕಿಯ ಆಟೊರಿಕ್ಷಾ ಚಾಲಕ, ಮಾನಂಪಾಡಿ ನಿವಾಸಿ ದಿನೇಶ್(46) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಪಡುಬಿದ್ರೆಯ ಮಹಿಳೆಯೊಬ್ಬಳಿಗೆ ಆರೋಪಿ ದಿನೇಶ್ ಮೊಬೈಲ್ ಕರೆ ಮಾಡಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಇದರಿಂದ ಬೇಸತ್ತ ಮಹಿಳೆ ಇಂದು ಬೆಳಗ್ಗೆ ಆತನನ್ನು ಉಪಾಯವಾಗಿ ಪಡುಬಿದ್ರೆ ಬಸ್ ನಿಲ್ದಾಣಕ್ಕೆ ಕರೆಸಿದ್ದಾಳೆ. ಅಲ್ಲಿಗೆ ತಂದೆಯೊಂದಿಗೆ ಬಂದ ಮಹಿಳೆ ದಿನೇಶ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಆತನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾಳೆ ದೂರಲಾಗಿದೆ. ಈ ವೇಳೆ ದಿನೇಶ್ ಹಠಾತ್ ಕುಸಿದರೆನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ.

ದಿನೇಶ್‌ರನ್ನು ಹಲ್ಲೆ ನಡೆಸಿ ಕೊಲೆಗೈಯಲಾಗಿದೆ ಎಂದು ಆರೋಪಿಸಿ ಪಡುಬಿದ್ರೆ ಠಾಣೆಯಲ್ಲಿ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ದಿನೇಶ್‌ರ ಸಾವಿಗೆ ಹಲ್ಲೆ ಕಾರಣವೇ ಅಥವಾ ಹೃದಯಾಘಾತದಿಂದ ಅವರು ಕುಸಿದು ಮೃತಪಟ್ಟರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News