×
Ad

ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಬೇಡ: ಸಂಸದ ನಳಿನ್, ಶಾಸಕ ವೇದವ್ಯಾಸ್

Update: 2018-11-07 17:36 IST

ಮಂಗಳೂರು, ನ.7: ಟಿಪ್ಪು ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸದಂತೆ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ವೇದವ್ಯಾಸ್ ಕಾಮತ್ ಅವರು ದ.ಕ. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರತ್ಯೇಕವಾಗಿ ಪತ್ರ ಬರೆದು ತಿಳಿಸಿದ್ದಾರೆ.

ಟಿಪ್ಪು ಜಯಂತಿ ಆಚರಣೆಗೆ ಪ್ರಾರಂಭದಿಂದಲೂ ನಾಡಿನ ಸಾರ್ವಜನಿಕರು ಹಾಗೂ ವಿಚಾರವಾದಿಗಳು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಟಿಪ್ಪುಕನ್ನಡ ಮತ್ತು ಹಿಂದೂ ವಿರೋಧಿಯಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. ಈ ಹಿಂದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಟಿಪ್ಪು ಜಯಂತಿ ಆಚರಣೆ ಸಂದರ್ಭ ವಿರೋಧಿ ಹೋರಾಟ ನಡೆದು ಹಿಂಸಾಚಾರಕ್ಕೆ ಕಾರಣವಾಗಿತ್ತು ಎಂದು ಸಂಸದ ನಳಿನ್ ತನ್ನ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಶಾಸಕ ವೇದವ್ಯಾಸ್ ಕಾಮತ್, ನ.10ರಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗುವ ಟಿಪ್ಪು ಜಯಂತಿಗೆ ತನ್ನ ವಿರೋಧವಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ಮುದ್ರಿಸಬಾರದೆಂದು ಹೇಳಿದ್ದಾರೆ.

ಟಿಪ್ಪು ಜಯಂತಿ ಆಚರಿಸುವ ಬದಲು ಎಲ್ಲ ಧರ್ಮದ ಜನರನ್ನು ಪ್ರೀತಿಸಿ, ಗೌರವಿಸುತ್ತಿದ್ದ ಎ.ಪಿ..ಅಬ್ದುಲ್ ಕಲಾಂ ಅವರಂತಹ ವಿಜ್ಞಾನಿಗಳ ಜಯಂತಿಯನ್ನು ರಾಜ್ಯ ಸರಕಾರ ಆಚರಿಸಬಹುದಿತ್ತು ಎಂದು ಶಾಸಕ ಕಾಮತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News