×
Ad

ಉಡುಪಿಗೆ ನಗರ ಅನಿಲ ವಿತರಣೆ ನೆಟ್‌ವರ್ಕ್ ಯೋಜನೆಯ ವಿತರಣೆ ಹಕ್ಕು ಪಡೆದ ಅದಾನಿ ಸಮೂಹ

Update: 2018-11-07 19:28 IST

ಉಡುಪಿ, ನ.7: ಅದಾನಿ ಸಮೂಹದ ಅಂಗಸಂಸ್ಥೆ ಅದಾನಿ ಗ್ಯಾಸ್ ಲಿಮಿಟೆಡ್ ಸಂಸ್ಥೆಯು ಉಡುಪಿ ಜಿಲ್ಲೆಗೆ ನಗರ ಅನಿಲ ವಿತರಣೆ ಯೋಜನೆಯಡಿ(ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್-ಸಿಜಿಡಿ) ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಮತ್ತು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಯೋಜನೆಯ ವಿತರಣೆ ಹಕ್ಕನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿಯಿಂದ ಪಡೆದುಕೊಂಡಿದೆ ಎಂದು ಅದಾನಿ ಸಮೂಹದ ಜಂಟಿ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ತಿಳಿಸಿದ್ದಾರೆ.

ಅದಾನಿ ಗ್ಯಾಸ್ ಲಿಮಿಟೆಡ್(ಎಜಿಎಲ್) ಕೈಗಾರಿಕೆ, ವಾಣಿಜ್ಯ, ಗೃಹಬಳಕೆಗೆ ಬೇಕಾಗುವ ಅನಿಲವನ್ನು ಪೂರೈಸಲು ಪಿಎನ್‌ಜಿ ಮತ್ತು ವಾಹನಗಳಿಗೆ ಬೇಕಾಗುವ ಅನಿಲವನ್ನು ಪೂರೈಸಲು ಸಿಎನ್‌ಜಿ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ನೆಟ್‌ವರ್ಕ್‌ನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಆಳ್ವ ಹೇಳಿದ್ದಾರೆ.

ಎಜಿಎಲ್ ಪ್ರಸ್ತುತ ಗುಜರಾತ್‌ನ ಅಹ್ಮದಾಬಾದ್ ಮತ್ತು ವಡೋದರಾ, ಹರ್ಯಾಣದ ಫರೀದಾಬಾದ್ ಹಾಗೂ ಉತ್ತರ ಪ್ರದೇಶದ ಖುರ್ಜಾದಲ್ಲಿ ಸುಮಾರು 3.50 ಲಕ್ಷ ಮನೆಗಳಿಗೆ ಪಿಎನ್‌ಜಿ ಮತ್ತು 2 ಲಕ್ಷಕ್ಕಿಂತ ಅಧಿಕ ವಾಹನಗಳಿಗೆ ಸಿಎನ್‌ಜಿ ಮೂಲಕ ಅನಿಲವನ್ನು ವಿತರಿಸುತ್ತಿದೆ ಎಂದೂ ಆಳ್ವ ವಿವರಿಸಿದ್ದಾರೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿ (ಪಿಎನ್‌ಜಿಆರ್‌ಬಿ), ರಾಜ್ಯ ಸರಕಾರಗಳ ಸಹಯೋಗದೊಂದಿಗೆ ದೇಶಾದ್ಯಂತ ಸಿಜಿಡಿ ನೆಟ್‌ವರ್ಕ್‌ಗಳ ಅಭಿವೃದ್ಧಿಗೆ ಚಾಲನೆ ನೀಡುತ್ತಿದೆ. ಇತ್ತೀಚೆಗೆ ಪಿಎನ್‌ಜಿಆರ್‌ಬಿತನ್ನ 9ನೇ ಬಿಡ್ಡಿಂಗ್‌ನಲ್ಲಿ ದೇಶದ 22 ರಾಜ್ಯಗಳ ಒಟ್ಟು 174 ಜಿಲ್ಲೆಗಳಲ್ಲಿ ಸಿಜಿಡಿ ಯೋಜನೆಯನ್ನು ವಿತರಿಸಲು 85 ಭೌಗೋಳಿಕ ಪ್ರದೇಶಗಳಾಗಿ (ಜಿಯೊಗ್ರಾಫಿಕಲ್ ಏರಿಯಾ) ವಿಂಗಡಿಸಿ ಬಿಡ್ ಮೂಲಕ ಹಲವಾರು ಸಂಸ್ಥೆಗಳಿಗೆ ನೀಡಿದೆ. ಉಡುಪಿ ಭೌಗೋಳಿಕ ಪ್ರದೇಶದ ಹಕ್ಕನ್ನು ಅದಾನಿ ಗ್ಯಾಸ್ ಲಿಮಿಟೆಡ್ ಪಡೆದುಕೊಂಡಿದೆ ಎಂದು ಆಳ್ವ ತಿಳಿಸಿದರು.

9ನೇ ಬಿಡ್ಡಿಂಗ್‌ನಲ್ಲಿ ಗೆದ್ದುಕೊಂಡಿರುವ ಜಿಲ್ಲೆಗಳಲ್ಲಿ ನ.22ರಂದು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಜನೆಗೆ ಸಾಂಕೇತಿಕ ಚಾಲನೆ ನೀಡಲಿದ್ದಾರೆ ಎಂದು ಆಳ್ವ ನುಡಿದರು.

ಸಿಜಿಡಿ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಸುಮಾರು 1,10,099 ಪಿಎನ್‌ಜಿ ಸಂಪರ್ಕಗಳು, 11 ಸಿಎನ್‌ಜಿ ಘಟಕಗಳು ಮತ್ತು 569 ಕಿ.ಮೀ ಉದ್ದದ ಪೈಪ್‌ಲೈನ್ ನೆಟ್‌ವರ್ಕ್ ಇದ್ದು, ಸುಮಾರು 8 ವರ್ಷಗಳ ಯೋಜನೆ ಇದಾಗಿದೆ. ಯೋಜನೆಯಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳೂ ದೊರಕಲಿವೆ ಎಂದು ಕಿಶೋರ್ ಆಳ್ವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News