ನವೆಂಬರ್ 19ಕ್ಕೆ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ?

Update: 2018-11-07 14:00 GMT

ಹೊಸದಿಲ್ಲಿ, ನ. 7: ಅನಾರೋಗ್ಯ ಹಾಗೂ ಸರಕಾರ ದೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಊರ್ಜಿತ್ ಪಟೇಲ್ ನವೆಂಬರ್ 19ರಂದು ನಡೆಯಲಿರುವ ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಆನ್‌ಲೈನ್ ಪತ್ರಿಕೆ ‘ಮನಿ ಲೈಫ್’ ಬುಧವಾರ ವರದಿ ಮಾಡಿದೆ.

ಸರಕಾರದೊಂದಿಗಿನ ಸಂಘರ್ಷದಿಂದ ಅವರ ಸುಸ್ತಾಗಿದ್ದಾರೆ. ಇದು ಅವರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟು ಮಾಡಿದೆ ಎಂದು ಗವರ್ನರ್ ಅವರ ನಿಕಟ ಮೂಲಗಳನ್ನು ಉಲ್ಲೇಖಿಸಿ ‘ಮನಿ ಲೈಫ್’ ತಿಳಿಸಿದೆ. ಎಂಎಸ್‌ಎಂಇಗಿರುವ ಸಾಲದ ನಿಯಮಗಳನ್ನು ಸಡಿಲಿಸುವಂತೆ ಹಾಗೂ ಸಾರ್ವಜನಿಕರಿಗೆ ವೆಚ್ಚ ಮಾಡಬಹುದಾದ ಆರ್‌ಬಿಐಯ ಹೆಚ್ಚುವರಿ ಹಣವನ್ನು ವರ್ಗಾಯಿಸುವ ಕುರಿತಂತೆ ಆರ್‌ಬಿಐಯೊಂದಿಗೆ ಸರಕಾರದ ತಿಕ್ಕಾಟ ನಡೆಸಿತ್ತು. ಆರ್‌ಬಿಐಯ ಸ್ವಾತಂತ್ರ್ಯ ಕಡೆಗಣಿಸುವುದು ಮಹಾ ದುರಂತಕ್ಕೆ ಕಾರಣವಾಗಬಹುದು ಎಂದು ಕಳೆದ ತಿಂಗಳು ಆರ್‌ಬಿಐಯ ಉಪ ಗವರ್ನರ್ ವಿರಳ್ ಆಚಾರ್ಯ ಅವರು ಭಾಷಣವೊಂದರಲ್ಲಿ ಹೇಳಿದ ಬಳಿಕ ಆರ್‌ಬಿಐ ಹಾಗೂ ಸರಕಾರದ ನಡುವೆ ಬಿಕ್ಕಟ್ಟು ಆರಂಭಗೊಂಡಿತ್ತು.

ಪಟೇಲ್ ಅವರ ರಾಜೀನಾಮೆಗೆ ಉತ್ತೇಜನದ ಅಪಾಯ ಎದುರಿಸುತ್ತಿರುವ ಹೊರತಾಗಿಯೂ ಸರಕಾರ, ತನ್ನ ಬೇಡಿಕೆಗಳನ್ನು ಈಡೇರಿಸಲು ಆರ್‌ಬಿಐ ಮೇಲೆ ಒತ್ತಡ ಹೇರುತ್ತಿದೆ ಎಂದು ‘ರಾಯ್ಟರ್’ ವರದಿ ಹೇಳಿದೆ.

ಬೇಡಿಕೆ ನಿರಾಕರಿಸುತ್ತಿರುವುದರಿಂದ ಹಾಗೂ ರಚನಾತ್ಮಕ ಮಾತಕತೆಯಲ್ಲಿ ತೊಡಗದೇ ಇರುವುದರಿಂದ ಆರ್‌ಬಿಐ ಬಗ್ಗೆ ಕೇಂದ್ರ ಸರಕಾರ ಅತಿ ಹೆಚ್ಚು ನಿರಾಸೆಗೊಂಡಿದೆ ಎಂದು ಸರಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ ವರದಿ ಮಾಡಿದೆ. ವಿತ್ತೀಯ ಕೊರತೆಗಾಗಿ ಕಾಯ್ದಿರಿಸಿದ ನಿಧಿಯಿಂದ ಹೆಚ್ಚು ಹಣವನ್ನು ವರ್ಗಾ ಯಿಸುವಂತೆ ಸರಕಾರದ ಮನವಿಯನ್ನು ಆರ್‌ಬಿಐ ಸತತವಾಗಿ ನಿರಾಕರಿಸುತ್ತಾ ಬಂದಿತ್ತು. ಆರ್‌ಬಿಐಯ ಮಾಜಿ ಗವರ್ನರ್ ರಘುರಾಮ ರಾಜನ್ ಬುಧವಾರ ಸುದ್ದಿವಾಹಿನಿ ಯೊಂದಕ್ಕೆ ಸಂದರ್ಶನ ನೀಡಿದ ಸಂದರ್ಭ, ತನ್ನ ಅಧಿಕಾರದ ಅವಧಿಯಲ್ಲಿ ಕೂಡ ಕೇಂದ್ರ ಸರಕಾರ ಪತ್ರ ಬರೆದು ಇದು ಸಡಿಲಿಸಿ, ಅದು ಸಡಿಲಿಸಿ ಎಂದು ಅನೇಕ ಬಾರಿ ಹೇಳಿದೆ ಎಂದಿದ್ದಾರೆ.

ನಿಯಂತ್ರಕರ ಮಂಡಳಿ ಆಡಳಿತ ಮಾತ್ರ ನಡೆಸಬೇಕು, ಕಾರ್ಯಾಚರಣೆಯ ನಿರ್ಧಾರದ ಮಧ್ಯೆ ಹಸ್ತಕ್ಷೇಪ ನಡೆಸಬಾರದು ಎಂದು ಹೇಳುವ ಮೂಲಕ ಊರ್ಜಿತ್ ಪಟೇಲ್ ಅವರ ಪೂರ್ವಾಧಿಕಾರಿ ರಘುರಾಮ ರಾಜನ್ ಆರ್‌ಬಿಐಗೆ ಬೆಂಬಲವಾಗಿ ನಿಂತಿದ್ದಾರೆ. ‘‘ಆರ್‌ಬಿಐ ಮಂಡಳಿ ಕಾರ್ಯಾಚರಣೆ ನಿರ್ವಹಿಸುವ ಮಂಡಳಿ ಅಲ್ಲ. ಅದು ವೃತ್ತಿಪರ ಮೇಲ್ವಿಚಾರಕರು ಅಥವಾ ಕೇಂದ್ರ ಬ್ಯಾಂಕರ್‌ಗಳ ನೇತೃತ್ವ ಹೊಂದಿಲ್ಲ.’’ ಎಂದು ಅವರು ಹೇಳಿದ್ದಾರೆ. ನಿಯಂತ್ರಕ ಮಂಡಳಿ ಸದಸ್ಯರ ಪಾತ್ರ ಸಲಹೆ-ಸೂಚನೆಗಳನ್ನು ನೀಡುವುದೇ ಹೊರತು, ಆರ್‌ಬಿಐಯ ಕಾರ್ಯಾಚರಣೆಯ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವುದಾಗಲಿ, ಆರ್‌ಬಿಐಯನ್ನು ನಿರ್ವಹಿಸುತ್ತಿರುವ ಉನ್ನತ ಅಧಿಕಾರಗಳ ನಿರ್ಧಾರವನ್ನು ಬದಲಾಯಿಸಲು ತಮ್ಮ ನಿರ್ಧಾರವನ್ನು ಹೇರುವುದಾಗಲಿ ಅಲ್ಲ ಎಂದು ಅವರು ಹೇಳಿದರು. ಆರ್‌ಬಿಐ ಕಾಯ್ದಿರಿಸಿದ ದೊಡ್ಡ ಮೊತ್ತದ ನಿಧಿಯನ್ನು ವರ್ಗಾವಣೆ ಮಾಡುವುದರಿಂದ ವಿತ್ತೀಯ ಕೊರತೆಯ ಗುರಿ ತಲಪುಲು ಸರಕಾರಕ್ಕೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ರಘುರಾಮ ರಾಜನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News