ಕಪ್ಪು ಹಣದ ಸಮಸ್ಯೆಗೆ ಯಾವುದೇ ಕಡಿವಾಣ ಬಿದ್ದಿಲ್ಲ: ಶೇ.60 ಭಾರತೀಯರ ಅಭಿಪ್ರಾಯ

Update: 2018-11-07 14:33 GMT

ಹೊಸದಿಲ್ಲಿ, ನ.7: ಕಪ್ಪುಹಣದ ಸಮಸ್ಯೆಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ನೋಟು ನಿಷೇಧಿಸುವ ನಿರ್ಧಾರ ಕೈಗೊಂಡಿದ್ದರೂ, ಈ ಎರಡು ವರ್ಷಗಳಲ್ಲಿ ಮತ್ತೆ ಕಪ್ಪುಹಣದ ಸಮಸ್ಯೆ ಈ ಹಿಂದಿನ ಸ್ಥಿತಿಗೇ ಮರಳಿದೆ ಎಂದು ಶೇ.60ರಷ್ಟು ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ. 2016ರ ನವೆಂಬರ್ 8ರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನೋಟು ನಿಷೇಧ ನಿರ್ಧಾರ ಕೈಗೊಂಡ ಸಂದರ್ಭ ದೇಶದ ಅರ್ಥವ್ಯವಸ್ಥೆಗೆ ಕಂಟಕವಾಗಿದ್ದ ಕಪ್ಪುಹಣವನ್ನು ತೊಡೆದು ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿತ್ತು. ಆದರೆ ಎರಡು ವರ್ಷದ ಬಳಿಕ ಉದ್ದೇಶ ಸಫಲವಾಗಿದೆಯೇ ಎಂಬುದನ್ನು ಕಂಡುಕೊಳ್ಳಲು ‘ಲೋಕಲ್ ಸರ್ಕಲ್ಸ್’ ನಡೆಸಿದ ಸಮೀಕ್ಷೆಯಲ್ಲಿ ಶೇ.60ರಷ್ಟು ಭಾರತೀಯರು ನಕಾರಾತ್ಮಕ ಉತ್ತರ ನೀಡಿದ್ದು ಕಪ್ಪುಹಣದ ಸಮಸ್ಯೆ ಮತ್ತೆ ಹಿಂದಿನ ಸ್ಥಿತಿಗೇ ಮರಳಿದ್ದಲ್ಲದೆ, 2019ರ ಲೋಕಸಭಾ ಚುನಾವಣೆ ಸಂದರ್ಭ ಇನ್ನಷ್ಟು ಅಧಿಕಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಆದರೆ ಶೇ. 40ರಷ್ಟು ಜನತೆ, ನೋಟು ರದ್ದತಿಯಿಂದ ತೆರಿಗೆ ತಪ್ಪಿಸುವವರನ್ನು ತೆರಿಗೆ ಜಾಲದಡಿ ತರಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರೆ, ಶೇ.25ರಷ್ಟು ಮಂದಿ ನೋಟು ರದ್ದತಿ ನಿರ್ಧಾರ ಒಂದು ವ್ಯರ್ಥ ಪ್ರಯತ್ನ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ. ಶೇ.23ರಷ್ಟು ಮಂದಿ ನೋಟು ರದ್ದತಿಯಿಂದ ಪ್ರತ್ಯಕ್ಷ ತೆರಿಗೆ(ನೇರ ತೆರಿಗೆ) ಪ್ರಮಾಣ ಅಧಿಕವಾಗಿದೆ ಎಂದು ಅಭಿಪ್ರಾಯಪಟ್ಟರೆ, ನೋಟು ರದ್ದತಿಯಿಂದ ಚಲಾವಣೆಯಲ್ಲಿದ್ದ ಕಪ್ಪುಹಣ ನಿಯಂತ್ರಣಕ್ಕೆ ಬಂದಿದೆ ಎಂದು ಕೇವಲ ಶೇ.13ರಷ್ಟು ಮಂದಿ ಮಾತ್ರ ಹೇಳಿದ್ದಾರೆ. ಶೇ.39ರಷ್ಟು ಮಂದಿ ತಾವು ರಶೀದಿ ಪಡೆಯದೆ ವಸ್ತುಗಳನ್ನು ಖರೀದಿಸುವುದಾಗಿ ತಿಳಿಸಿದ್ದರೆ, ಬಹುತೇಕ ಮಂದಿ ತಾವು ಕಳೆದ ಒಂದು ವರ್ಷದಲ್ಲಿ ಆಸ್ತಿಗಳನ್ನು ನಗದು ರೂಪದಲ್ಲಿ ಹಣ ಪಾವತಿಸಿ ಅಥವಾ ಆಂಶಿಕವಾಗಿ ನಗದು ರೂಪದಲ್ಲಿ ಪಾವತಿಸಿ ಖರೀದಿಸಿದ್ದಾಗಿ ತಿಳಿಸಿದ್ದಾರೆ.

ನೋಟು ರದ್ದತಿ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ತಾತ್ಕಾಲಿಕ ಪ್ರಭಾವ ಬೀರಿದ್ದರೂ, ಇದೀಗ ಮತ್ತೆ ಚೇತರಿಸಿಕೊಂಡಿದ್ದು ಈ ಹಿಂದಿನಂತೆಯೇ ಕಪ್ಪು ಹಣದ ಚಲಾವಣೆ ನಡೆಯುತ್ತಿದೆ ಎಂದು ಹೆಚ್ಚಿನವರು ಅಭಿಪ್ರಾಯಪಟ್ಟಿರುವುದಾಗಿ ಸಮೀಕ್ಷೆಯ ವರದಿ ತಿಳಿಸಿದೆ. 215 ತಾಲೂಕುಗಳಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News