ರಾಮ ಜನ್ಮಸ್ಥಳದ ಕುರಿತು ಗೊಂದಲವಿಲ್ಲ : ಆದಿತ್ಯನಾಥ್

Update: 2018-11-07 14:52 GMT

ಲಕ್ನೊ, ನ.7: ರಾಮ ಜನ್ಮಸ್ಥಳದ ಕುರಿತು ಯಾವುದೇ ಗೊಂದಲವಿಲ್ಲ. ಅಯೋಧ್ಯೆಯಲ್ಲಿ ರಾಮ ದೇವಸ್ಥಾನ ಇತ್ತೆಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದ್ದು, ದೇವಸ್ಥಾನ ಇಲ್ಲಿಯೇ ಇರಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

ವಿವಾದಿತ ಸ್ಥಳದಲ್ಲಿರುವ ರಾಮಲಲ್ಲ ತಾತ್ಕಾಲಿಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತಂತೆ ತನ್ನಲ್ಲಿ ಯೋಜನೆಯೊಂದಿದ್ದು, ಈ ಬಗ್ಗೆ ಇನ್ನಷ್ಟು ಚರ್ಚೆ ನಡೆಯಬೇಕಿದೆ. ಇಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಎರಡು ಜಾಗಗಳನ್ನು ಅಂತಿಮಗೊಳಿಸಲಾಗಿದೆ ಎಂದರು. ಅಯೋಧ್ಯೆಯಲ್ಲಿ 151 ಮೀಟರ್ ಎತ್ತರದ ರಾಮನ ಪ್ರತಿಮೆ ನಿರ್ಮಾಣ ಮಾಡುವ ಯೋಜನೆಯನ್ನು ಉ.ಪ್ರದೇಶ ಸರಕಾರ ಮುಂದಿರಿಸಿದೆ. ಆದರೆ ಪ್ರತಿಮೆಯ ಎತ್ತರವನ್ನು 200 ಮೀಟರ್‌ಗೆ ಹೆಚ್ಚಿಸುವ ಮೂಲಕ ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹಿರಿಮೆಗೆ ಪಾತ್ರವಾಗಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.

ಫೈಝಾಬಾದ್ ನಗರದ ಹೆಸರನ್ನು ಅಯೋಧ್ಯೆ, ಫೈಝಾಬಾದ್ ವಿಮಾನ ನಿಲ್ದಾಣದ ಹೆಸರನ್ನು ಶ್ರೀರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ವೈದ್ಯಕೀಯ ಕಾಲೇಜಿನ ಹೆಸರನ್ನು ರಾಜಾ ದಶರಥ ಮೆಡಿಕಲ್ ಕಾಲೇಜು ಎಂದು ಬದಲಾಯಿಸುವುದಾಗಿ ಘೋಷಿಸಿದ ಆದಿತ್ಯನಾಥ್, ಮುಂದಿನ ಕೆಲ ವರ್ಷಗಳಲ್ಲಿ ಅಯೋಧ್ಯೆಯು ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದೆನಿಸಲಿದೆ ಎಂದಿದ್ದಾರೆ.

ದೀಪಾವಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಅಯೋಧ್ಯೆಯಲ್ಲಿ ನಿರ್ಮಿಸಲಾಗುವ ರಾಮನ ಪ್ರತಿಮೆ ಪ್ರವಾಸೀ ಆಕರ್ಷಣೆಯಾಗಲಿದೆ. ಇದು ಸ್ಥಾಪನೆಯಾಗುವ ಜಮೀನಿಗೆ ಅನುಗುಣವಾಗಿ ಪ್ರತಿಮೆಯ ಎತ್ತರ ಮತ್ತಿತರ ಅಂಶಗಳನ್ನು ನಿರ್ಧರಿಸಲಾಗುವುದು. ಇದೊಂದು ಭವ್ಯ ಪ್ರತಿಮೆಯಾಗಲಿದ್ದು ದೇವಸ್ಥಾನದ ಒಳಗೆ ಸ್ಥಾಪಿಸಲಾಗುವುದು. ಇದು ಅಯೋಧ್ಯೆಯ ತೋರ್ಗಂಬ(ಮಾರ್ಗಸೂಚಿ) ಯಾಗಲಿದೆ ಎಂದರು. ವಿವಾದಿತ ರಾಮಜನ್ಮಭೂಮಿ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣ ಮಾಡುವ ಯೋಜನೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ದೇವಸ್ಥಾನವಿತ್ತು ಮತ್ತು ಇಲ್ಲಿಯೇ ಇರಲಿದೆ. ಆದರೆ ಏನು ಮಾಡುವುದಿದ್ದರೂ ಸಂವಿಧಾನದ ವ್ಯಾಪ್ತಿ ಮೀರುವ ಪ್ರಶ್ನೆಯಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News