​ಕರ್ನಾಟಕದ ಮೀನಿಗೆ ಗೋವಾದಲ್ಲಿ ನಿಷೇಧ: ತೆರವಿಗೆ ಆಗ್ರಹ

Update: 2018-11-07 16:25 GMT

ಉಡುಪಿ, ನ.7: ಕರ್ನಾಟಕ ಕರಾವಳಿ ಸಹಿತ ವಿವಿಧ ರಾಜ್ಯಗಳಿಂದ ಮೀನುಗಳ ಆಮದನ್ನು ಗೋವಾ ರಾಜ್ಯ ಸರಕಾರ ನಿಷೇಧಿಸಿದ್ದು, ಇದನ್ನು ತೆರವುಗೊಳಿಸಲು ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಗೋವಾದ ಕೆಲವು ಮೀನು ವ್ಯಾಪಾರಸ್ಥರು ರಾಸಾಯನಿಕ ಬಳಕೆಯ ಸುಳ್ಳು ಕಾರಣ ನೀಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿ ಕರ್ನಾಟಕದಿಂದ ಮೀನು ಆಮದು ಮಾಡುವುದನ್ನು ನಿಷೇಧಿಸಲಾಗಿದೆ. ಈಗಾಗಲೇ ಮೀನಿಗೆ ಫಾರ್ಮಲಿನ್ ಸಿಂಪಡಣೆಯ ಕುರಿತಂತೆ ಹಲವು ಬಾರಿ ಸರಕಾರದ ಅಧಿಕೃತ ಲ್ಯಾಬ್‌ಗಳಲ್ಲಿಯೇ ವೈಜ್ಞಾನಿಕವಾಗಿ ಪರೀಕ್ಷೆ ನಡೆಸಿ, ಯಾವುದೇ ರಾಸಾಯನಿಕ ಬಳಕೆಯಾಗುತ್ತಿಲ್ಲ, ಈ ಮೀನು ಸೇವನೆಗೆ ಯೋಗ್ಯವಾಗಿದ್ದು ಯಾವುದೇ ಆತಂಕಪಡುವ ಅಗತ್ಯವಿಲ್ಲವೆಂದು ಆಹಾರ ಇಲಾಖೆಯ ಅಧಿಕಾರಿಗಳೇ ಹೇಳಿದ್ದಾರೆ. ಆದ್ದರಿಂದ ಈಗ ಈ ನಿಷೇಧ ಸರಿಯಲ್ಲ ಎಂದು ಯಶ್ಪಾಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕರಾವಳಿ ಭಾಗದ ಮೀನುಗಾರರು ಕಳೆದ ಹಲವು ದಶಕಗಳಿಂದ ಪ್ರಾಮಾಣಿಕವಾಗಿ ವ್ಯವಹಾರವನ್ನು ಗೋವಾ ಸಹಿತ ದೇಶದ ವಿವಿಧ ರಾಜ್ಯ ಗಳೊಂದಿಗೆ ನಡೆಸುತಿದ್ದು, ಈವರೆಗೆ ಯಾವುದೇ ಸಮಸ್ಯೆಗಳಿಲ್ಲದೆ ನಡೆಯುತ್ತಿದ್ದ ವ್ಯವಹಾರ ಇದೀಗ ಗೋವಾದ ಕೆಲವು ಮೀನು ಮಾರಾಟಗಾರರ ಸ್ವಾರ್ಥಕ್ಕೆ ಬಲಿಯಾಗುತ್ತಿದೆ. ಇವರು ತಮ್ಮ ಸ್ವಾರ್ಥಕ್ಕಾಗಿ ಮೀನಿನ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಲಾಭಗಳಿಸಲು ದುರಾಸೆಯಿಂದ ರಾಸಾಯನಿಕ ಬಳಕೆಯ ಸಬೂಬು ನೀಡಿ ಮೀನು ಆಮದು ನಿಷೇಧವಾಗುವಂತೆ ಮಾಡಿದ್ದಾರೆ ಎಂದವರು ಆರೋಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಜಾರಿಯಲ್ಲಿರುವ ಈ ನಿಷೇಧದಿಂದಾಗಿ ನಮ್ಮ ರಾಜ್ಯದ ಮತ್ಸೋದ್ಯಮದ ಕೋಟ್ಯಂತರ ರೂ.ಗಳ ವ್ಯಾಪಾರ ವಹಿವಾಟು ಸ್ತಬ್ಧವಾಗಿದೆ. ಈಗಾಗಲೇ ಮತ್ಸಕ್ಷಾಮ, ಇಂಧನದ ಬೆಲೆ ಏರಿಕೆ ಹಾಗೂ ವಿವಿಧ ಸಮಸ್ಯೆಗಳನ್ನು ಅನುಭವಿಸಿರುವ ಮೀನುಗಾರರ ಆರ್ಥಿಕ ಪರಿಸ್ಥಿತಿಯನ್ನು ಇದು ಇನ್ನಷ್ಟು ಹದಗೆಡಿಸಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ಮೀನುಗಾರರ ಈ ಸಂಕಷ್ಟವನ್ನು ಮನಗಂಡು ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಯಶ್ಪಾಲ್ ಸುವರ್ಣ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News