ಎಂಆರ್‌ಪಿಎಲ್‌ಗೆ ಭೂಸ್ವಾಧೀನ ಪ್ರಕ್ರಿಯೆ: ಕಡಿಮೆ ಬೆಲೆ ನಿಗದಿಗೆ ಭೂಮಾಲಕರ ಸಮಿತಿ ಆಕ್ಷೇಪ

Update: 2018-11-07 16:36 GMT

ಮಂಗಳೂರು, ನ.7: ಎಂಆರ್‌ಪಿಎಲ್ ನಾಲ್ಕನೆ ಹಂತದ ವಿಸ್ತರಣಾ ಯೋಜನೆಗೆ ಭೂಸ್ವಾಧೀನಗೊಂಡ ಜಮೀನಿನ ದರ ನಿಗದಿಯಲ್ಲಿ ಕೆಐಎಡಿಬಿ ಹಾಗೂ ಎಂಆರ್‌ಪಿಎಲ್ ನೀಡಿದ ಭರವಸೆಯಂತೆ ನಡೆದುಕೊಳ್ಳದೆ ಕಡಿಮೆ ಬೆಲೆ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಕಂಪೆನಿಯ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುವುದಾಗಿ ಪೆರ್ಮುದೆ, ಕುತ್ತೆತ್ತೂರು, ಎಕ್ಕಾರು ಪ್ರದೇಶದ ಭೂ ಮಾಲಕರನ್ನೊಳಗೊಂಡ ಸಂಯುಕ್ತ ನಾಗರಿಕ ಹಿತರಕ್ಷಣಾ ಸಮಿತಿ ತಿಳಿಸಿದೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿತರಕ್ಷಣಾ ಸಮಿತಿ ಅಧ್ಯಕ್ಷ ರೊನಾಲ್ಡ್ ಫೆರ್ನಾಂಡಿಸ್, 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರ ಎಕರೆಗೆ 80 ಲಕ್ಷ ರೂ.ನಿಂದ 1.20 ಲಕ್ಷ ರೂ. ಕನಿಷ್ಠ ಬೆಲೆಯಿಂದ ಪ್ರಾರಂಭಿಸಿ ಮಾರುಕಟ್ಟೆ ಬೆಲೆ ಹಾಗೂ ಗ್ರಾಮೀಣ ಗುಣಾಂಕವನ್ನು ನಿರ್ಧರಿಸುವಂತೆ ಕೆಐಎಡಿಬಿ ಹಾಗೂ ಎಂಆರ್‌ಪಿಎಲ್‌ಗೆ ಈ ಹಿಂದೆಯೇ ಕೇಳಿಕೊಳ್ಳಲಾಗಿತ್ತು. ಆದರೆ ನವೆಂಬರ್ 5ರಂದು ನಡೆದ ಭೂಸ್ವಾಧೀನ ಪ್ರತಿ ಎಕರೆಗೆ 50ರಿಂದ 60 ಲಕ್ಷ ರೂ. ನಿಗದಿ ಮಾಡುವುದಾಗಿ ಕಂಪೆನಿ ತಿಳಿಸಿದೆ. ಇದನ್ನು ವಿರೋಧಿಸಿ ಜಮೀನುಗಳ ಮಾಲಕರು ಸಭೆಯನ್ನು ಬಹಿಷ್ಕರಿಸಿದ್ದರು. ಆದರೆ ಅಧಿಕಾರಿಗಳು ರೈತರ ಮತ್ತು ಭೂಮಿಯ ಮಾಲಕರ ಒಪ್ಪಿಗೆ ಪಡೆಯದೆ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರ ಜೊತೆ ಚರ್ಚಿಸದೆ ಭೂಮಿಯ ಬೆಲೆಯನ್ನು ನಿಗದಿ ಪಡಿಸಲು ಹೊರಟಿರುವ ನಿರ್ಧಾರವನ್ನು ತಾವು ವಿರೊಧಿಸುವುದಾಗಿ ರೊನಾಲ್ಡ್ ಫೆರ್ನಾಂಡಿಸ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ದೀಪಕ್ ಪೆರ್ಮುದೆ, ಸುಧಾಕರ ಶೆಟ್ಟಿ, ಸಂದೇಶ್ ಪೂಜಾರಿ, ಕೇಶವ ಶೆಟ್ಟಿ, ಡೋನಿ ಸುವಾರಿಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News