ಸಿರಿಸೇನ ಬಣದ ಸಚಿವ ರಾಜೀನಾಮೆ; ವಿಕ್ರಮೆಸಿಂಘೆ ಬಣಕ್ಕೆ

Update: 2018-11-07 17:02 GMT

ಕೊಲಂಬೊ, ನ. 7: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರ ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲಯನ್ಸ್ (ಯುಪಿಎಫ್‌ಎ) ಸರಕಾರದ ಸಹಾಯಕ ಸಚಿವರೊಬ್ಬರು ಮಂಗಳವಾರ ರಾಜೀನಾಮೆ ನೀಡಿದ್ದಾರೆ ಹಾಗೂ ಉಚ್ಚಾಟಿತ ಪ್ರಧಾನಿ ರನಿಲ್ ವಿಕ್ರಮೆಸಿಂಘೆ ಬಣಕ್ಕೆ ಸೇರ್ಪಡೆಗೊಂಡಿದ್ದಾರೆ.

ಅಧ್ಯಕ್ಷ ಸಿರಿಸೇನ ಅಕ್ಟೋಬರ್ 26ರಂದು ಪ್ರಧಾನಿ ವಿಕ್ರಮೆಸಿಂಘೆಯನ್ನು ಉಚ್ಚಾಟಿಸಿ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೂತನ ಪ್ರಧಾನಿಯಾಗಿ ನೇಮಿಸಿರುವುದನ್ನು ಸ್ಮರಿಸಬಹುದಾಗಿದೆ. ಬಳಿಕ ಅವರು ಸಂಸತ್ತನ್ನು ನವೆಂಬರ್ 16ರವರೆಗೆ ಅಮಾನತಿನಲ್ಲಿಟ್ಟಿದ್ದಾರೆ.
ಸಿರಿಸೇನ/ರಾಜಪಕ್ಸರ ಬೆಂಬಲಿಗರ ಪಟ್ಟಿಯಲ್ಲಿದ್ದ 96 ಸಂಸದರ ಪೈಕಿ ಒಬ್ಬರಾಗಿದ್ದ ಮನುಶ ನನಯಕ್ಕಾರ ಮಂಗಳವಾರ ಸಿರಿಸೇನರಿಗೆ ಪತ್ರವೊಂದನ್ನು ಬರೆದು, ನನ್ನ ಅಭಿಪ್ರಾಯದಲ್ಲಿ ವಿಕ್ರಮೆಸಿಂಘೆಯೇ ದೇಶದ ಕಾನೂನುಬದ್ಧ ಪ್ರಧಾನಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಸಂಸತ್ ಸ್ಪೀಕರ್ ಕರು ಜಯಸೂರಿಯ ಕೂಡ ವಿಕ್ರಮೆಸಿಂಘೆಯನ್ನೇ ಪ್ರಧಾನಿಯಾಗಿ ಸ್ವೀಕರಿಸಿದ್ದಾರೆ.
ಕಾರ್ಮಿಕ ಮತ್ತು ವಿದೇಶ ಉದ್ಯೋಗ ಖಾತೆಯ ಸಹಾಯಕ ಸಚಿವ ನನಯಕ್ಕಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿ ವಿಕ್ರಮೆಸಿಂಘೆ ಬಣವನ್ನು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News