ದೇರಳಕಟ್ಟೆ: ಬೆಂಕಿ ಕೊಟ್ಟರೆ ಉರಿಯುತ್ತಿದೆ ಬಾವಿ ನೀರು!

Update: 2018-11-07 18:15 GMT

ಕೊಣಾಜೆ, ನ.7: ಬೆಂಕಿ ಹಚ್ಚಿದರೆ ಬಾವಿ ನೀರು ಉರಿಯುವ ವಿಲಕ್ಷಣ ಘಟನೆ ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಳಕಟ್ಟೆ ಸಮೀಪದ ಕಾನಕೆರೆ ಎಂಬಲ್ಲಿ ಕಳೆದೆರೆಡು ದಿನಗಳಿಂದ ನಡೆಯುತ್ತಿದೆ.

ಕಾನಕೆರೆಯ ನಾಲ್ಕು ಬಾವಿಗಳ ನೀರಿನಲ್ಲಿ ಪಟ್ರೋಲಿಯಂ ಅಂಶ ಕಂಡುಬರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಾನಕೆರೆ ಪ್ರದೇಶ ಜನವಸತಿ ಹೊಂದಿದ್ದು, ಇಲ್ಲಿ ಹಲವು ತೆರೆದ ಬಾವಿಗಳಿವೆ. ಈ ಪೈಕಿ ನಾಲ್ಕು ಬಾವಿಗಳಲ್ಲಿನ ನೀರು ಪೆಟ್ರೋಲ್ ವಾಸನೆಯಿಂದ ಕೂಡಿದ್ದು, ಬೆಂಕಿ ಕೊಟ್ಟರೆ ಹೊತ್ತಿ ಉರಿಯುತ್ತಿದೆ. ಇದು ಸ್ಥಳೀಯ ನಿವಾಸಿಗಳನ್ನು ಆತಂಕಿತರನ್ನಾಗಿಸಿದೆ.

ಕಳೆದೆರಡು ದಿನಗಳಿಂದ ಇಂತಹ ಪ್ರಕರಣ ನಡೆಯುತ್ತಿದ್ದರೂ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮಂಗಳವಾರ ರಾತ್ರಿ ಗ್ರಾಪಂ ಸದಸ್ಯ ರಝಾಕ್ ಬಾವಿಗಳನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ. ಬುಧವಾರ ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ರಾತ್ರಿಯವರೆಗೆ ಅಗ್ನಿಶಾಮಕ ದಳ ಇತ್ತ ಆಗಮಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಪೆಟ್ರೋಲ್ ಬಂಕ್ ನಿಂದ ಸಮಸ್ಯೆ?
ಕಾನಕೆರೆ ತಗ್ಗು ಪ್ರದೇಶವಾಗಿದೆ. ಎತ್ತರದಲ್ಲಿರುವ ದೇರಳಕಟ್ಟೆ ಬೆಳ್ಮ ಗ್ರಾಮ ಪಂಚಾಯತ್‌ಸಮೀಪದಲ್ಲೇ ಪೆಟ್ರೋಲ್ ಬಂಕ್‌ವೊಂದು ಕಾರ್ಯಾಚರಿಸುತ್ತಿದೆ. ಇದರ ನೇರ ಕೆಳಭಾಗವಾಗಿರುವ ಕಾನಕೆರೆಯಲ್ಲಿ ಹಲವು ಮನೆಗಳಿವೆ. ಕೆಲವು ವರ್ಷಗಳ ಹಿಂದೆ ಈ ಪೆಟ್ರೋಲ್ ಪಂಪ್‌ನ ತಡೆಗೋಡೆ ಒಡೆದು ಪೆಟ್ರೋಲ್ ಟ್ಯಾಂಕ್‌ಗೂ ಹಾನಿಯಾಗಿತ್ತು. ಬಳಿಕ ಅದನ್ನು ದುರಸ್ತಿಪಡಿಸಲಾಗಿತ್ತಾದರೂ ಅದರಿಂದ ಪೆಟ್ರೋಲ್ ಸೋರಿಕೆಯಾಗಿ ಬಾವಿ ಸೇರುತ್ತಿದೆ ಎಂಬುದು ಸ್ಥಳೀಯರ ಆರೋಪ. ಇದೀಗ ಈ ಪೆಟ್ರೋಲ್ ಬಂಕ್‌ನವರೂ ಬಾವಿ ನೀರನ್ನು ಪರಿಶೀಲಿಸಿದ್ದು, ಅದರಲ್ಲಿ ಪೆಟ್ರೋಲಿಯಂ ಅಂಶ ಇದೆ ಎಂದು ತಿಳಿಸಿದ್ದಾರೆ. ಆದರೆ ತಮ್ಮ ಬಂಕ್‌ಗೂ ಈ ಸಮಸ್ಯೆಗೂ ಸಂಬಂಧ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಪಂಚಾಯತ್ ಸದಸ್ಯ ರಝಾಕ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News