​ಕಮ್ಯೂನಿಸ್ಟರ ಬಗ್ಗೆ ಎಸ್.ಎಲ್.ಭೈರಪ್ಪ ಟೀಕೆ ಸಲ್ಲದು: ಸಿಪಿಎಂ

Update: 2018-11-08 11:45 GMT

ಮಂಗಳೂರು, ನ.8: ಜಿಲ್ಲೆಯ ಅಭಿವೃದ್ಧಿಗೆ ಎಡಪಂಥೀಯ ಚಳವಳಿ ಮಾರಕ ಎಂಬ ಎಸ್.ಎಲ್. ಭೈರಪ್ಪಹೇಳಿಕೆ ಅಜ್ಞಾನದಿಂದ ಕೂಡಿದ್ದು, ಈ ಟೀಕೆ ಸಲ್ಲದು ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ.

ಕಾರ್ಪೊರೇಟ್ ಸಂಘಟನೆಗಳು ನಗರ ಕೇಂದ್ರಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಅದ್ದೂರಿಯಾಗಿ ನಡೆಸುತ್ತಿದ್ದು, ಅವುಗಳ ವಿಸ್ತರಣೆಯಾಗಿ ಇತ್ತೀಚೆಗೆ ‘ಮಂಗಳೂರು ಲಿಟ್ ಫೆಸ್ಟ್’ ನಡೆದಿದೆ. ಮಂಗಳೂರಿನಲ್ಲಂತೂ ಅದು ಸಂಪೂರ್ಣವಾಗಿ ಹಿಂದುತ್ವ ಸಂಘಟನೆಗಳಿಂದಲೇ ಸಂಯೋಜನೆಗೊಂಡಿತ್ತು.

ಜಿಲ್ಲೆಯು 20ನೇ ಶತಮಾನದುದ್ದಕ್ಕೂ ಅಭಿವೃದ್ಧಿ ದಾರಿಯಲ್ಲಿ ಮುನ್ನಡೆಯುವಲ್ಲಿ ಸ್ವಾತಂತ್ರ್ಯ ಚಳವಳಿಯ ಕಾಲದಿಂದಲೂ ಜತೆಯಲ್ಲಿ ಸಾಗಿ ಬಂದಿರುವ ಕಮ್ಯೂನಿಸ್ಟ್ ಚಳವಳಿಯು ಕಾರಣವಾಗಿದೆ. ಎನ್.ಎಲ್.ಉಪಾಧ್ಯಾಯ, ಸಿಂಪ್ಸನ್ ಸೋನ್ಸ್, ಎ.ಕೃಷ್ಣ ಶೆಟ್ಟಿ, ಬಿ.ವಿ.ಕಕ್ಕಿಲ್ಲಾಯ, ಎಂ.ಎಚ್.ಕೃಷ್ಣಪ್ಪ ಮೊದಲಾದವರು ಕಮ್ಯೂನಿಸ್ಟ್ ಚಳವಳಿಯನ್ನು ಜಿಲ್ಲೆಯಲ್ಲೂ ಬಳಿಕ ಕರ್ನಾಟಕದಲ್ಲೂ ಕಟ್ಟುವುದರಲ್ಲಿ ಪ್ರಮುಖ ಪಾತ್ರವಹಿಸಿದವರು.

ಔದ್ಯೋಗೀಕರಣಗೊಳ್ಳುತ್ತಿರುವ ಜಿಲ್ಲೆಯಲ್ಲಿ ಕಾರ್ಮಿಕ ಚಳವಳಿಯನ್ನು ಕಟ್ಟುತ್ತಾ, ಕಾರ್ಮಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿವಳಿಕೆ ಕೊಡುತ್ತಾ ಬಂದವರು ಇವರು. ಇಡೀ ರಾಜ್ಯದಲ್ಲೇ ಪ್ರಥಮವಾಗಿ ‘ಉಳುವವನಿಗೇ ಭೂಮಿ’ ಹೋರಾಟವನ್ನು ಕಟ್ಟಿ, ಭೂಸುಧಾರಣಾ ಶಾಸನ ಜಾರಿಯಾಗುವುದಕ್ಕೆ ಕಾರಣರಾಗಿದ್ದಾರೆ.

ಇದರಿಂದಾಗಿ ರಾಜ್ಯದ ಇತರ ಜಿಲ್ಲೆಗಳಿಗಿಂತಲೂ ದ.ಕ-ಉಡುಪಿ ಜಿಲ್ಲೆಗಳು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ-ಎಲ್ಲ ರಂಗಗಳಲ್ಲೂ ಅತಿ ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಸಮೀಪದ ಕೇರಳ ರಾಜ್ಯದ ಅಭಿವೃದ್ಧಿಗೆ ಅಲ್ಲಿನ ಕಮ್ಯೂನಿಸ್ಟ್ ಚಳವಳಿಯೇ ಕಾರಣ ಎನ್ನುವುದನ್ನು ಕಮ್ಯೂನಿಸ್ಟ್ ವಿರೋಧಿಗಳೇ ಒಪ್ಪಿಕೊಳ್ಳುತ್ತಾರೆ.

ಎಸ್.ಎಲ್.ಭೈರಪ್ಪಅಭಿಮಾನ ಹೊಂದಿರುವ ಹಿಂದುತ್ವ ಸಂಘಟನೆಗಳಲ್ಲಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಾಗಲಿ, ಆನಂತರದಲ್ಲಿ ರೈತ ಕಾರ್ಮಿಕ ಹೋರಾಟಗಳಲ್ಲಾಗಲೀ ನೇತೃತ್ವ ವಹಿಸಿದ ಒಂದೇಒಂದು ಉದಾಹರಣೆಯೂ ಇಲ್ಲ ಎಂಬುದನ್ನು ಭೈರಪ್ಪಅವರಿಗೆ ಯಾರಾದರೂ ಅವರ ಮಿತ್ರರು ತಿಳಿಸಿಕೊಡುವುದು ಒಳ್ಳೆಯದು ಎಂದು ಸಿಪಿಎಂ ಕಾರ್ಯದರ್ಶಿ ವಸಂತ ಆಚಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News