×
Ad

ಕಾನಕೆರೆ ಬಾವಿಯಲ್ಲಿ ತೈಲ ಪ್ರಕರಣ: ಸ್ಥಳೀಯ ಪೆಟ್ರೋಲ್ ಬಂಕ್ ಬಂದ್

Update: 2018-11-08 18:32 IST

ಕೊಣಾಜೆ, ನ.8: ಕಾನಕೆರೆ ಬಾವಿಯ ನೀರಿನಲ್ಲಿ ಇಂಧನ ತೈಲಾಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ದೇರಳಕಟ್ಟೆಯ ಪೆಂಟ್ರೋಲ್ ಬಂಕ್‌ವೊಂದನ್ನು ಒಂದು ದಿನದ ಮಟ್ಟಿಗೆ ಮುಚ್ಚಲಾಗಿದೆ.

ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡ್ ಕಾನಕೆರೆಯ ನಾಲ್ಕು ಬಾವಿಗಳ ನೀರಿನಲ್ಲಿ ಕಳೆದ 2-3 ದಿನಗಳಿಂದ ಇಂಧನ ತೈಲದ ಅಂಶ ಕಂಡುಬರುತ್ತಿದೆ. ಈ ನೀರಿಗೆ ಬೆಂಕಿ ಹಚ್ಚಿದರೆ ಹೊತ್ತಿ ಉರಿಯುತ್ತದೆ. ಈ ಬಾವಿಯಿರುವ ಸ್ಥಳದಿಂದ 150 ಮೀಟರ್ ಎತ್ತರದಲ್ಲಿ ಪೆಟ್ರೋಲ್ ಬಂಕ್‌ವೊಂದು ಕಾರ್ಯಾಚರಿಸುತ್ತಿದೆ. ಆ ಬಂಕ್‌ನಿಂದ ತೈಲ ಸೋರಿಕೆಯಾಗಿ ಬಾವಿ ಸೇರುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಇಂಡಿಯನ್ ಪೆಟ್ರೋಲ್‌ನ ವಿತರಣಾಧಿಕಾರಿ ಗೌತಮ್ ಕೂಡಾ ಪೆಟ್ರೋಲ್ ಬಂಕ್‌ಗೆ ಆಗಮಿಸಿದರು. ಈ ವೇಳೆ ಮಾತನಾಡಿದ ಅವರು, ‘‘ಪೆಟ್ರೋಲ್ ಬಂಕ್‌ನ್ನು ಪರೀಶೀಲಿಸಲಾಗಿದೆ. ಇಲ್ಲಿ ಯಾವುದೇ ಯಡವಟ್ಟು ಆಗಿಲ್ಲ’’ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೆಳ್ಮ ಗ್ರಾಪಂ ಉಪಾಧ್ಯಕ್ಷ ಬಿ.ಎಂ.ಸತ್ತಾರ್, ‘‘ಈ ಸಮಸ್ಯೆಯ ಮೂಲ ಪತ್ತೆ ಆಗುವವರೆಗೆ ಪೆಟ್ರೋಲ್ ಬಂಕ್ ಬಂದ್ ಮಾಡುವುದು ಉತ್ತಮ’’ ಎಂಬ ಸಲಹೆ ನೀಡಿದರು.

ಅದರಂತೆ ಪೊಲೀಸರ ಸಮ್ಮುಖದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಲೆಕ್ಕಾಚಾರ ಬರೆದಿಟ್ಟು ಗುರುವಾರ ಮಧ್ಯಾಹ್ನ ಒಂದು ಗಂಟೆಯಿಂದ ಬಂಕ್‌ನಲ್ಲಿ ತೈಲ ವಿತರಣೆಯನ್ನು ಸ್ಥಗಿತಗೊಳಿಲಾಯಿತು. ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗೆ ಪೊಲೀಸರು, ಗ್ರಾಮ ಪಂಚಾಯತ್ ಪ್ರತಿನಿಧಿಗಳ ಸಮ್ಮುಖದಲ್ಲಿ ಬಂಕ್‌ನ್ನು ಮತ್ತೊಮ್ಮೆ ಪರಿಶೀಲಿಸಲು ತೀರ್ಮಾನಿಸಲಾಯಿತು.

‘‘15 ವರ್ಷಗಳ ಹಿಂದೆ ಸಿಡಿಲು ಬಡಿದು ಪೆಟ್ರೋಲ್ ಬಂಕ್‌ನ ರಿಟರ್ನಿಂಗ್ ವಾಲ್‌ಗೆ ಹಾನಿಯಾಗಿತ್ತು. ಆದರೆ ಇದರಿಂದ ಟ್ಯಾಂಕ್‌ಗೆ ಯಾವುದೇ ಹಾನಿ ಸಂಭವಿಸಿರಲಿಲ್ಲ. ಪ್ರತಿದಿನ ತೈಲ ಪರಿಶೀಲನೆ ನಡೆಸಲಾಗುತ್ತಿದ್ದು, ನಮ್ಮಿಂದ ಯಾವುದೇ ಲೋಪ ಉಂಟಾಗಿರುವ ಸಾಧ್ಯತೆ ಇಲ್ಲ’’ ಎಂದು ಬಂಕ್ ಮಾಲಕ ಸೀತಾರಾಮ ಶೆಟ್ಟಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News