ಕಾಪು ಪ್ರೆಸ್‌ಕ್ಲಬ್‌ನಿಂದ ದೀಪಾವಳಿ ಸೌಹಾರ್ದ ಸಂಭ್ರಮ ಕಾರ್ಯಕ್ರಮ

Update: 2018-11-08 13:42 GMT

ಕಾಪು, ನ.8: ತುಳುವರ ಆಚರಣೆ, ನಂಬಿಕೆಗಳು ತುಳುನಾಡಿನ ಸರ್ವ ಜನಾಂಗದ ಜನರಿಗೂ ಮಾದರಿಯೆನಿಸಿದೆ ಎಂದು ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ತಿಳಿಸಿದ್ದಾರೆ.

 ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ನಡೆದ ದೀಪಾವಳಿ ಸೌಹಾರ್ದ ಸಂಭ್ರಮ ಕಾರ್ಯಕ್ರಮದಲ್ಲಿ ತುಳುನಾಡಿನ ದೀಪಾವಳಿ ಆಚರಣೆ ಕುರಿತು ಉಪನ್ಯಾಸ ನೀಡಿದರು.

ತುಳುನಾಡಿನಲ್ಲಿ ಆಚರಣೆಯಲ್ಲಿರುವ ಜಾನಪದ ಕಲೆ, ಸಂಸ್ಕತಿ, ಆರಾಧನಾ ಕಲೆಗಳು ವೈವಿಧ್ಯಮಯವೆನಿಸಿದೆ. ಕೃಷಿ ಪ್ರಧಾನ ಸಂಸ್ಕತಿಯನ್ನು ಹೊಂದಿರುವ ತುಳುನಾಡಿನಲ್ಲಿ ಅತ್ಯಂತ ಶ್ರೇಷ್ಠ ಹಬ್ಬ ದೀಪಾವಳಿ. ದೀಪಾವಳಿ ಎಂದರೆ ಬೆಳಕಿನ ಹಬ್ಬವಾಗಿದ್ದರೂ ಬಹಳ ಹಿಂದಿನಿಂದಲೇ ನಮ್ಮ ಹಿರಿಯರು ಈ ಹಬ್ಬದ ಮೂಲಕ ಪರಿಸರ ಸ್ವಚ್ಛತೆಯ ಪರಿಕಲ್ಪನೆಗೆ ಮಹತ್ವ ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
 

 ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂಬುದು ನಾಚಿಕೆಗೇಡಿನ ಹೇಳಿಕೆ:
ಜನಪ್ರತಿನಿಧಿಗಳು ಸರ್ಕಾರದ ಒಂದು ಅಂಗ. ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಭಾಗವಹಿಸುವುದು ಅತೀ ಅಗತ್ಯ ಎಂದು ಬನ್ನಂಜೆ ಬಾಬು ಅಮೀನ್ ಹೇಳಿದರು.
ಸರಕಾರ ಆಚರಿಸುವ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರು ನಮೂದಿಸದಂತೆ ಜನಪ್ರತಿನಿಧಿಗಳು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ತಮ್ಮ ಹೆಸರನ್ನು ನಮೂದಿಸಬಾರದು ಎಂದು ಹೇಳುವವರು ಸರ್ಕಾರದ ಪ್ರತಿನಿಧಿ ಅಲ್ಲ. ಇಂತಹ ದುಸ್ಥಿತಿ 50 ವರ್ಷಗಳ ಹಿಂದೆ ಇರಲಿಲ್ಲ. ಆದರೆ ಈಗ ಜನಪ್ರತಿನಿಧಿಗಳು ಇಂತಹ ಹೇಳಿಕೆ ನೀಡುವುದರಿಂದ ನಾಚಿಕೆಯಾಗುತ್ತಿದೆ ಎಂದರು.

ಕಾಪು ಬಿಕ್ಕೊ ಕಂಪೆನಿಯ ಆಡಳಿತ ನಿರ್ದೇಶಕ ಶ್ರೀಧರ ಶೇಣವ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭ ಕಾಪು ಪ್ರೆಸ್ ಕ್ಲಬ್ ವತಿಯಿಂದ ಬನ್ನಂಜೆ ಬಾಬು ಅಮೀನ್ ಅವರನ್ನು ಸನ್ಮಾನಿಸಲಾಯಿತು.

ಶಿರ್ವ ರೋಟರಿ ಕ್ಲಬ್ ಅಧ್ಯಕ್ಷ ದಯಾನಂದ ಶೆಟ್ಟಿ ದೆಂದೂರು ಶುಭಹಾರೈಸಿದರು. ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಮಿತಿಯ ಸದಸ್ಯ ಬಿ.ಪುಂಡಲೀಕ ಮರಾಠೆ ಸ್ವಾಗತಿಸಿದರು. ಹರೀಶ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಂತೋಷ್ ಕಾಪು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News