ನಗರ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ಅಧ್ಯಕ್ಷರ ಆಯ್ಕೆ: ಮಟ್ಟಾರು ಆಗ್ರಹ

Update: 2018-11-08 15:08 GMT

ಉಡುಪಿ, ನ.8: ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದು ಈಗಾಗಲೇ ಎರಡು ತಿಂಗಳು ಕಳೆದಿದ್ದರೂ, ಇನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯದೇ ಗೊಂದಲ ಮುಂದುವರಿದಿದೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಫಲಿತಾಂಶ ಬರುತ್ತಿದ್ದಂತೆ ಬದಲಾಯಿಸಿದ್ದು ಈಗಿನ ಎಲ್ಲಾ ಗೊಂದಲಗಳಿಗೆ ಕಾರಣ ಎಂದು ಆರೋಪಿಸಿದರು.

ನ್ಯಾಯಾಲಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಹಾದಿ ಸುಗಮಗೊಳಿಸಿದ್ದರೂ, ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಮತ್ತೆ ವಿಳಂಬ ಮಾಡಲಾಗಿದೆ. ಇದೀಗ ಚುನಾವಣೆ ಮುಗಿದಿದ್ದು, ಕೂಡಲೇ ಜಿಲ್ಲೆಯ ನಾಲ್ಕು ನಗರ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಆದೇಶ ಹೊರಡಿಸಬೇಕು ಎಂದು ಅವರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ಬಿಜೆಪಿ ಭದ್ರ: ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಿರೀಕ್ಷೆಯಂತೆ ಜಯಗಳಿಸಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಗೆ 14,500 ಮತಗಳ ಮುನ್ನಡೆ ದೊರಕಿರುವು ದರಿಂದ ಜಿಲ್ಲೆಯಲ್ಲಿ ಬಿಜೆಪಿಯ ಸ್ಥಾನ ಭದ್ರವಾಗಿರುವುದು ಸಾಬೀತಾಗಿದೆ ಎಂದು ಮಟ್ಟಾರು ತಿಳಿಸಿದರು.

ಟಿಪ್ಪು ಜಯಂತಿಗೆ ಪ್ರತಿಭಟನೆ: ನಾಡಿನ ಜನತೆಯ ತೀವ್ರ ವಿರೋಧದ ಹೊರತಾಗಿಯೂ ರಾಜ್ಯ ಸರಕಾರ ಮತಾಂಧ ಟಿಪ್ಪುವಿನ ಜಯಂತಿಯನ್ನು ಈ ಬಾರಿ ನ.10ರಂದು ನಡೆಸಲು ನಿರ್ಧರಿಸಿದೆ. ಇದರ ವಿರುದ್ಧ ಬಿಜೆಪಿ ಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಮಟ್ಟಾರು ತಿಳಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಿದಾಗ ಅದನ್ನು ವಿರೋಧಿಸಿದ್ದ ಕುಮಾರಸ್ವಾಮಿ ಈಗ ಸಮ್ಮಿಶ್ರ ಸರಕಾರದ ನಾಯಕನಾಗಿ ಈ ಬಾರಿ ನ.10ರಂದು ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವುದು ಅವರ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಈ ಬಾರಿ ಸಾರ್ವಜನಿಕವಾಗಿ ಅಲ್ಲದಿದ್ದರೂ, ಪ್ರತಿ ಜಿಲ್ಲಾ ಮಟ್ಟದಲ್ಲಿ ಟಿಪ್ಪು ಜಯಂತಿ ನಡೆಯುತ್ತಿದ್ದು, ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಇದಕ್ಕೆ ವಿರೋಧ ಸೂಚಿಸಲಿದೆ. ಉಡುಪಿಯ ಜಿಲ್ಲಾ ಕಚೇರಿ ಎದುರು ನ.9ರಂದು ಸಂಜೆ 4 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಮಟ್ಟಾರು ತಿಳಿಸಿದರು.

ಪತ್ರಿಕಾಗೋಷ್ಠಿಯ ಬಿಜೆಪಿ ಜಿಲ್ಲಾ ಮುಖಂಡರಾದ ಯಶ್ಪಾಲ್ ಸುವರ್ಣ, ಸುರೇಶ್‌ನಾಯಕ್ ಕುಯಿಲಾಡಿ, ಪ್ರಭಾಕರ ಪೂಜಾರಿ ಹಾಗೂ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News