ಕೃಷಿ ಪ್ರಧಾನ ದೀಪಾವಳಿ ಸಮೃದ್ಧಿಯ ಸಂಕೇತ: ಸುಮಾ

Update: 2018-11-08 16:12 GMT

ಉಡುಪಿ, ನ.8: ನಮ್ಮ ಪರಂಪರೆಯಲ್ಲಿ ಸೌಹಾರ್ದ ಅಡಗಿದೆ. ಪ್ರಾಚೀನ ಕಾಲದಿಂದಲೂ ನಾವೆಲ್ಲ ಈ ದೇಶದಲ್ಲಿ ಸಹಬಾಳ್ವೆಯಿಂದ ಸಂಭ್ರಮ ಸಡಗರದಿಂದ ಬದುಕುತ್ತಿದ್ದೇವೆ. ಕೃಷಿ ಪ್ರಧಾನವಾದ ದೀಪಾವಳಿ ಹಬ್ಬವು ಸಮೃದ್ಧಿಯ ಸಂಕೇತವಾಗಿದೆ ಎಂದು ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಸುಮಾ ಎಸ್. ಹೇಳಿದ್ದಾರೆ.

ಉಡುಪಿ ಸೌಹಾರ್ದ ಸಮಿತಿ, ಶೋಕಮಾತಾ ಇಗರ್ಜಿ, ಕೆಥೊಲಿಕ್ ಸಭಾ ಉಡುಪಿ ಘಟಕ, ಲಯನ್ಸ್ ಜಿಲ್ಲಾ 317 ಸಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮ ಇವುಗಳ ಸಹಯೋಗದೊಂದಿಗೆ ಇಗರ್ಜಿಯ ವಠಾರದಲ್ಲಿ ಗುರುವಾರ ಆಯೋಜಿಸಲಾದ ಸರ್ವಧರ್ಮ ದೀಪಾವಳಿ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆಯನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ವಹಿಸಿದ್ದರು.

ಮಲ್ಪೆ ಯುಬಿಎಂ ಎಬ್ನಿಜರ್ ಚರ್ಚ್‌ನ ಪಾಸ್ಟರ್ ರೆ.ಸಂತೋಷ್ ಎ., ಲಯನ್ಸ್ ಜಿಲ್ಲಾ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ ಶುಭಾಶಂಸನೆಗೈದರು. ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅತಿ ವಂ.ವಲೇರಿಯನ್ ಮೆಂಡೊನ್ಸಾ ಸ್ವಾಗತಿಸಿದರು.

ಸೌಹಾರ್ದ ಸಮಿತಿಯ ಸಂಚಾಲಕ ಮೈಕಲ್ ಡಿಸೋಜ ವಂದಿಸಿದರು. ಕಾರ್ಯಕ್ರಮ ಸಂಯೋಜಕ ಅಲ್ಫೋನ್ಸ್ ಡಿಕೋಸ್ಟ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಬೃಹತ್ ಗಾತ್ರದ ಗೋಪುರ ದೀಪದ ಪ್ರದರ್ಶನ, ಗೂಡುದೀಪಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಗಳು ಜರುಗಿದವು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News