ನೋಟು ನಿಷೇಧ ಸ್ವತಂತ್ರ ಭಾರತದ ಅತ್ಯಂತ ದೊಡ್ಡ ಹಗರಣ: ಕಾಂಗ್ರೆಸ್

Update: 2018-11-08 16:34 GMT

ಹೊಸದಿಲ್ಲಿ,ನ.8: ನೋಟು ನಿಷೇಧವು ಸ್ವತಂತ್ರ ಭಾರತದ ಅತ್ಯಂತ ದೊಡ್ಡ ಹಗರಣವಾಗಿದ್ದು,ಈ ಕುರಿತು ತನಿಖೆ ನಡೆಯಬೇಕಾಗಿದೆ ಎಂದು ಗುರುವಾರ ಆರೋಪಿಸಿರುವ ಕಾಂಗ್ರೆಸ್,ಪ್ರಧಾನಿ ನರೇಂದ್ರ ಮೋದಿಯವರ ಹೊಣೆಗೇಡಿತನದ ನಿರ್ಧಾರಕ್ಕಾಗಿ ಜನರು ಅವರನ್ನು ಶಿಕ್ಷಿಸಲಿದ್ದಾರೆ ಎಂದು ಒತ್ತಿ ಹೇಳಿದೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಆನಂದ ಶರ್ಮಾ ಅವರು,ನೋಟು ನಿಷೇಧವು ಬೃಹತ್ ಅಕ್ರಮ ಹಣ ವಹಿವಾಟು ಯೋಜನೆಯಾಗಿತ್ತು. ಅನುತ್ಪಾದಕ ಆಸ್ತಿಗಳ ಪ್ರಮಾಣದಲ್ಲಿ ತೀವ್ರ ಏರಿಕೆಯಾಗಿದೆ,ಬ್ಯಾಂಕುಗಳು ಸಂಕಷ್ಟದಲ್ಲಿವೆ. ಈಗ ಮೋದಿ ಸರಕಾರವು ಆರ್‌ಬಿಐನ ಮೀಸಲು ನಿಧಿಯನ್ನು ಕಿತ್ತುಕೊಳ್ಳಲೂ ಪಟ್ಟು ಹಿಡಿದಿದೆ ಎಂದು ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್  ಸುರ್ಜೆವಾಲಾ ಅವರು,ಬಿಜೆಪಿ ಸರಕಾರವು ಈ ಹಿಂದೆ ಮಾಡಿರುವಂತೆ ನೋಟು ನಿಷೇಧದ ಎರಡನೇ ವರ್ಷಾಚರಣೆಯ ಕುರಿತು ಜಾಹೀರಾತುಗಳನ್ನೇಕೆ ಪ್ರಕಟಿಸಿಲ್ಲ ಅಥವಾ ಜನರನ್ನೇಕೆ ಅಭಿನಂದಿಸಿಲ್ಲ ಎಂದು ಪ್ರಶ್ನಿಸಿದರು.

ನೋಟು ನಿಷೇಧವು ಸ್ವತಂತ್ರ ಭಾರತದ ಅತ್ಯಂತ ದೊಡ್ಡ ಹಗರಣವಾಗಿತ್ತು ಮತ್ತು ಇದರ ಮೂಲಕ ಹಲವಾರು ಜನರ ಕಪ್ಪುಹಣವು ಬಿಳಿಹಣವಾಗಿ ಪರಿವರ್ತನೆಗೊಂಡಿದೆ ಎಂದು ಅವರು ಆರೋಪಿಸಿದರು.

ಇದರಿಂದ ದೇಶಕ್ಕೆ ಆದ ಲಾಭವಾದರೂ ಏನು? ಕಪ್ಪು ಹಣ ಪತ್ತೆಯಾಗಿದೆಯೇ, ನಕಲಿ ನೋಟುಗಳು ವಶವಾಗಿವೆಯೇ, ನಕ್ಸಲ್‌ವಾದ ಮತ್ತು ಭೀತಿವಾದ ನಿಂತಿವೆಯೇ? ಇಲ್ಲ, ಬದಲಿಗೆ ಭಾರತೀಯ ಆರ್ಥಿಕತೆಯು ಮೂರು ಲಕ್ಷ ಕೋ.ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದ ಅವರು, ಮೋದಿ ಈ ವಿನಾಶದ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಮತ್ತು ದೇಶದ ಕ್ಷಮೆ ಯಾಚಿಸುವ ಕಾಲವೀಗ ಬಂದಿದೆ ಎಂದರು.

ನೋಟು ನಿಷೇಧದ ಎರಡನೇ ವರ್ಷಾಚರಣೆಯ ಪ್ರಯುಕ್ತ ಕಾಂಗ್ರೆಸ್ ಶುಕ್ರವಾರ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ನಡೆಸಲಿದೆ ಎಂದು ಶರ್ಮಾ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News