ಅಹ್ಮದಾಬಾದ್ ಹೆಸರು ಬದಲಿಸಲು ಎಲ್ಲ ಕಾನೂನು ಅಂಶಗಳ ಪರಿಶೀಲನೆ: ರೂಪಾನಿ

Update: 2018-11-08 16:58 GMT

ಹೊಸದಿಲ್ಲಿ,ನ.8: ರಾಜ್ಯ ಸರಕಾರವು ಎಲ್ಲ ಕಾನೂನು ಮತ್ತು ಇತರ ಅಂಶಗಳನ್ನು ಪರಿಶೀಲಿಸಿದ ಬಳಿಕ ಅಹ್ಮದಾಬಾದ್‌ನ ಹೆಸರನ್ನು ಕರ್ಣಾವತಿ ಎಂದು ಬದಲಿಸಲು ದೃಢವಾದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಗುರುವಾರ ಹೇಳಿದ್ದಾರೆ.

 ಅಹ್ಮದಾಬಾದ್‌ನ್ನು ಕರ್ಣಾವತಿ ಎಂದು ಮರುನಾಮಕರಣಗೊಳಿಸುವ ಬಗ್ಗೆ ಮಾತುಕತೆಗಳು ಸುದೀರ್ಘ ಕಾಲದಿಂದ ನಡೆಯುತ್ತಿದ್ದು,ಆ ಬಗ್ಗೆ ನಾವು ಚಿಂತನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿರುವುದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.

ಬಿಜೆಪಿಯು ಜನರ ಬೆಂಬಲವನ್ನು ಗಳಿಸುವಲ್ಲಿ ಯಶಸ್ವಿಯಾದರೆ ಅಹ್ಮಾದಾಬಾದ್‌ನ್ನು ಕರ್ಣಾವತಿ ಎಂದು ಮರುನಾಮಕರಣಗೊಳಿಸುವುದನ್ನು ತನ್ನ ಸರಕಾರವು ಪರಿಶೀಲಿಸುತ್ತಿದೆ ಎಂದು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಎರಡು ದಿನಗಳ ಹಿಂದೆ ಹೇಳಿದ್ದರು.

ಐತಿಹಾಸಿಕವಾಗಿ 11ನೇ ಶತಮಾನದಲ್ಲಿ ಅಶಾವಲ್ ಎಂಬ ಹೆಸರು ಹೊಂದಿದ್ದಾಗಲೇ ಅಹ್ಮಮದಾಬಾದ್ ಸುತ್ತುಮುತ್ತಲಿನ ಪ್ರದೇಶದಲ್ಲಿ ಜನವಸತಿಯಿತ್ತು. ಅಶಾವಲ್‌ನ ಭಿಲ್ಲ ದೊರೆಯನ್ನು ಯುದ್ಧದಲ್ಲಿ ಸೋಲಿಸಿದ್ದ ಅನ್ಹಿಲವರಾ(ಈಗಿನ ಪಾಟಣ್)ದ ಚಾಲುಕ್ಯ ದೊರೆ ಕರ್ಣ ಸಾಬರಮತಿ ನದಿ ತೀರದಲ್ಲಿ ಕರ್ಣಾವತಿ ಹೆಸರಿನ ನಗರವನ್ನು ಸ್ಥಾಪಿಸಿದ್ದ. 1411ರಲ್ಲಿ ಕರ್ಣಾವತಿ ಸಮೀಪ ರಕ್ಷಣಾ ಗೋಡೆಗಳನ್ನು ಹೊಂದಿದ್ದ ನೂತನ ನಗರಕ್ಕೆ ಶಿಲಾನ್ಯಾಸ ನೆರವೇರಿಸಿದ್ದ ಸುಲ್ತಾನ್ ಅಹ್ಮದ್ ಆ ಪ್ರದೇಶದಲ್ಲಿನ ಅಹ್ಮದ್ ಹೆಸರಿನ ನಾಲ್ವರು ಸಂತರ ಹೆಸರಿನಲ್ಲಿ ಅಹ್ಮದಾಬಾದ್ ಎಂದು ನಾಮಕರಣವನ್ನು ಮಾಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News