​ಕನ್ನಡ ಪುಸ್ತಕ ಪ್ರಾಧಿಕಾರ: ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

Update: 2018-11-08 17:07 GMT

ಉಡುಪಿ, ನ.8: ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಪ್ರಕಟಿಸುತಿದ್ದು, ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹಲವು ಪ್ರಕಾರಗಳ 360ಕ್ಕೂ ಅಧಿಕ ಸಾಹಿತ್ಯ ಕೃತಿಗಳನ್ನು ಮುದ್ರಿಸಿ ಪ್ರಕಟಿಸಿದೆ.

ಅತ್ಯಂತ ವೌಲಿಕವಾದ, ಪ್ರಾಜ್ಞರಿಂದ ರಚಿತವಾದ ಕೃತಿಗಳನ್ನು ಜನ ಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರ ನವೆಂಬರ್ ಪೂರ್ತಿ ಎಲ್ಲಾ ಪುಸ್ತಕಗಳನ್ನು ಶೇ.50ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ಜಿಲ್ಲಾ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಜಿಲ್ಲಾವಾರು ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಮಾರಾಟಕ್ಕೆ ಲಭ್ಯವಿದೆ.
ಅಲ್ಲದೇ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲದಲ್ಲಿಯೂ ಸಹ www.kannadapustakapradhikara.comನಲ್ಲಿ ಶೇ.50ರ ರಿಯಾಯಿತಿಯಲ್ಲಿ ನಮ್ಮ ಪುಸ್ತಕಗಳು ವಿಭಾಗದಲ್ಲಿ ಆಯ್ಕೆ ಮಾಡಿ, ಆನ್‌ಲೈನ್ ಮೂಲಕ ಹಣ ಪಾವತಿಸಿ ಪುಸ್ತಕಗಳನ್ನು ನೇರವಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080-22484516/22107704 /05 ಅನ್ನು ಸಂಪರ್ಕಿಸುವಂತೆ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳ ಪ್ರಕಟನೆ ತಿಳಿಸಿದೆ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ: ಕರ್ನಾಟಕ ಶಿಲ್ಪಕಲಾ ಅಕಾಡಮಿಯಿಂದ ಪ್ರಕಟವಾಗಿರುವ ಎಲ್ಲಾ ಪುಸ್ತಕಗಳನ್ನು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್‌ನಲ್ಲಿ ಶೇ.50ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. 

ಹೆಚ್ಚಿನ ಮಾಹಿತಿಗಾಗಿ ಅಕಾಡಮಿಯ ಇ-ಮೇಲ್ shilpakala.academy@gmail.com ಹಾಗೂ ವೆಬ್‌ಸೈಟ್    www.karnatakashilpakalaacademy.org ದೂರವಾಣಿ ಸಂಖ್ಯೆ: 080-22278725ನ್ನು ಸಂಪರ್ಕಿಸುವಂತೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟನೆ ತಿಳಿಸಿದೆ.

ಕರ್ನಾಟಕ ಲಲಿತಕಲಾ ಅಕಾಡಮಿ: ಕರ್ನಾಟಕ ಲಲಿತಕಲಾ ಅಕಾಡಮಿಯೂ ಪ್ರಕಟವಾಗಿರುವ ಎಲ್ಲಾ ಪುಸ್ತಕಗಳನ್ನು ನವೆಂಬರ್‌ನಲ್ಲಿ ಶೇ.50ರ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡಮಿಯ ಇಮೇಲ್ kla.karnataka@gmail.com  ಹಾಗೂ ವೆಬ್‌ಸೈಟ್  www.lalitkalakarnataka.org, ದೂ.ಸಂಖ್ಯೆ: 080- 22480297ನ್ನು ಸಂಪರ್ಕಿಸುವಂತೆ ಕರ್ನಾಟಕ ಲಲಿತಕಲಾ ಅಕಾಡಮಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News