ಸುಳ್ಳುಸಾಕ್ಷ್ಯ: ಕಥುವಾ ಅತ್ಯಾಚಾರ ಪ್ರಕರಣದ ಸಾಕ್ಷಿಗೆ ಶೋಕಾಸ್ ನೋಟಿಸ್ ಜಾರಿ

Update: 2018-11-08 17:24 GMT

ಜಮ್ಮು, ನ.8: ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ವ್ಯಕ್ತಿಯೊಬ್ಬ ಸುಳ್ಳುಸಾಕ್ಷ್ಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಆತನಿಗೆ ನ್ಯಾಯಾಲಯ ಶೋಕಾಸ್ ನೋಟಿಸ್ ಜಾರಿಮಾಡಿದೆ. ಕಥುವಾದಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಜಯ್‌ಕುಮಾರ್ ಅಲಿಯಾಸ್ ಅಜ್ಜು ಎಂಬಾತ ಸಾಕ್ಷಿಯಾಗಿದ್ದ. ಆದರೆ ಈತ ನ್ಯಾಯಾಲಯದಲ್ಲಿ ತನ್ನ ಹೇಳಿಕೆ ಬದಲಿಸಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ, ಹೇಳಿಕೆ ಬದಲಿಸಿದ ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಕಾರಣ ನೀಡುವಂತೆ ತಿಳಿಸಿ ಅಜಯ್ ಕುಮಾರ್‌ಗೆ ಸೆಷನ್ಸ್ ನ್ಯಾಯಾಧೀಶರು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.

 ಫೆಬ್ರವರಿಯಲ್ಲಿ ಜಮ್ಮುವಿನಲ್ಲಿ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿದ್ದ ಅಜಯ್ ಕುಮಾರ್, 8ರ ಹರೆಯದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ನಡೆಸಿರುವುದನ್ನು ಪರ್ವೇಶ್ ಕುಮಾರ್ ಅಲಿಯಾಸ್ ಮನ್ನು ಎಂಬಾತ ಗ್ರಾಫಿಕ್ ವಿವರಣೆ ಸಹಿತ ತಿಳಿಸಿರುವುದಾಗಿ ಹೇಳಿದ್ದ. ಆದರೆ ಬಳಿಕ ಸ್ವಯಂಪ್ರೇರಿತನಾಗಿ ತನ್ನ ಹೇಳಿಕೆಯನ್ನು ಹಿಂಪಡೆದಿದ್ದಾನೆ. ಈತ ಉದ್ದೇಶಪೂರ್ವಕವಾಗಿ ಹೀಗೆ ಮಾಡಿರುವುದಾಗಿ ಫಿರ್ಯಾದಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ತಿಳಿಸುವಂತೆ ಹಾಗೂ ನವೆಂಬರ್ 12ರಂದು ವಕೀಲರ ಮೂಲಕ ಅಥವಾ ವೈಯಕ್ತಿಕವಾಗಿ ಹಾಜರಾಗಿ ಹೇಳಿಕೆ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News