ಸಾಮಾಜಿಕ ಜಾಲತಾಣದಲ್ಲಿ ಪ್ರಚೋನಕಾರಿ ಪೋಸ್ಟ್ ಪ್ರಕರಣ: ಆರೋಪಿಯ ಬಂಧನ

Update: 2018-11-08 17:44 GMT

ಮೂಡುಬಿದಿರೆ, ನ.8: ಹಲವಾರು ನಕಲಿ ಫೇಸ್‌ಬುಕ್ ಖಾತೆಗಳನ್ನು ತೆರೆದು ಕೋಮು ಸಂಘರ್ಷಕ್ಕೆ ಕಾರಣವಾಗುವಂತಹ ಸಂದೇಶಗಳನ್ನು ಹಾಕುತ್ತಿದ್ದ ಮತ್ತು ಉದ್ಯಮಿಯೋರ್ವರಿಗೆ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣದ ಆರೋಪಿಯನ್ನು ಮೂಡುಬಿದಿರೆ ಪೋಲಿಸರು ಬಂಧಿಸಿದ್ದಾರೆ.

ಸುಳ್ಯ ತಾಲೂಕಿನ ಬೆಳ್ಳಾರೆಯ ನಿವಾಸಿ ಇಬ್ರಾಹೀಂ ಖಲೀಲ್ ಬಂಧಿತ ಆರೋಪಿ. ಈತ ದುಬೈಯ ಅಬುಧಾಬಿಯಲ್ಲಿ ಉದ್ಯೋಗದಲ್ಲಿದ್ದು, ಅಲ್ಲಿಂದಲೇ ಫೇಸ್‌ಬುಕ್‌ನಲ್ಲಿ ಹಲವು ನಕಲಿ ಖಾತೆಗಳನ್ನು ತೆರೆದು ಕೋಮು ಪ್ರಚೋದನಕಾರಿ ಸಂದೇಶವನ್ನು ಹಾಕುತ್ತಿದ್ದನೆನ್ನಲಾಗಿದೆ. ಇದರ ರಹಸ್ಯವನ್ನು ಪತ್ತೆ ಹಚ್ಚಿದ ಕಾರಣಕ್ಕೆ ಇಲ್ಲಿನ ವ್ಯಾಪಾರಿ ಅಬ್ದುಲ್ಲತೀಪ್ ಎಂಬವರಿಗೆ ಖಲೀಲ್ ಕೊಲೆ ಬೆದರಿಕೆಯೊಡ್ಡಿರುವ ಬಗ್ಗೆ ಜುಲೈ 25ರಂದು ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೆ ಆರೋಪಿ ವಿದೇಶದಲ್ಲಿದ್ದುದರಿಂದ ಪೊಲೀಸರಿಗೆ ಆತನ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಆರೋಪಿ ಖಲೀಲ್ ರಜೆಯ ನಿಮಿತ್ತ ಅಕ್ಟೋಬರ್ 31ರಂದು ಊರಿಗೆ ಮರಳಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೋಲಿಸರ ತಂಡವು ಸುಳ್ಯದ ಆತನ ಮನೆಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News