×
Ad

'ವಾಹನಗಳಲ್ಲಿ ಮಿತಿಮೀರಿದ ಟಿಂಟ್ ಬಳಕೆಗೆ ಕಡಿವಾಣ'

Update: 2018-11-09 18:11 IST

ಮಂಗಳೂರು, ನ.9: ನಗರದಲ್ಲಿ ಸಂಚರಿಸುವ ಕಾರು ಮತ್ತಿತರ ವಾಹನಗಳಲ್ಲಿ ಟಿಂಟ್ ಬಳಕೆ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅದರ ಕಡಿವಾಣಕ್ಕೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೊನ್-ಇನ್ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ವಾಹನಗಳಿಗೆ ಟಿಂಟ್ ಬಳಕೆ ಮಾಡುವಂತಿಲ್ಲ. ಈ ಹಿನ್ನೆಲಯಲ್ಲಿ ನಗರದಲ್ಲಿ ಟಿಂಟ್ ಬಳಸಿರುವ ವಾಹನಗಳ ವಿರುದ್ಧ ದಂಡ ವಿಧಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. 2016ರಲ್ಲಿ 6,348, 2017ರಲ್ಲಿ 12,102,2018 ಅಕ್ಟೋಬರ್‌ವರೆಗೆ 9,115 ವಾಹನಗಳ ವಿರುದ್ಧ ಕೇಸು ದಾಖಲಿಸಿ ದಂಡ ವಿಧಿಸಲಾಗಿದ್ದರೂ ದೊಡ್ಡ ಪ್ರಮಾಣದ ಪರಿಣಾಮ ಬೀರಿಲ್ಲ. ಆದ್ದರಿಂದ ಕೂಡಲೇ ಟಿಂಟ್ ಬಳಸಿದ ವಾಹನಗಳನ್ನು ಪತ್ತೆಹಚ್ಚಿ ಸಿಬ್ಬಂದಿಗಳೇ ಟಿಂಟ್ ತೆರವು ಮಾಡಲಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಸುರತ್ಕಲ್ ಪ್ರದೇಶದಲ್ಲಿ ಆಟೋ ರಿಕ್ಷಾದವರು ಮೀಟರ್ ಹಾಕುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಅಧಿಕಾರಿಗೆ ಸೂಚನೆ ನೀಡಿದರಲ್ಲದೆ ಸಾರ್ವಜನಿಕರು ಇಂತಹ ರಿಕ್ಷಾಗಳ ನೋಂದಣಿ ಸಂಖ್ಯೆಯನ್ನು ಪೊಲೀಸ್ ಕಂಟ್ರೋಲ್ ರೂಂ ಅಥವಾ ಅಧಿಕಾರಿಗಳಿಗೆ ತಿಳಿಸುವಂತೆ ಸಲಹೆ ನೀಡಿದರು.

ಬೈತುರ್ಲಿ ಜಂಕ್ಷನ್ ಬಳಿ 15ಕ್ಕೂ ಅಧಿಕ ಬೈಕ್‌ಗಳನ್ನು ಬೆಳಗ್ಗೆ ರಸ್ತೆ ಬದಿ ಪಾರ್ಕ್ ಮಾಡಿ ಸಂಜೆ ತೆರವುಗೊಳಿಸುತ್ತಾರೆ. ಇದರಿಂದ ಬಸ್‌ನಿಂದ ಇಳಿಯುವ, ರಸ್ತೆ ದಾಟುವ ಪ್ರಯಾಣಿಕರಿಗೆ, ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಫೆರ್ನಾಂಡೀಸ್ ದೂರು ನೀಡಿದರು. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಟ್ರಾಫಿಕ್ ಅಧಿಕಾರಿಗಳಿಗೆ ಕಮಿಷನರ್ ಸೂಚಿಸಿದರು.

ವಿದ್ಯಾರ್ಥಿಯೊಬ್ಬ ಕರೆಮಾಡಿ ಮಂಗಳೂರು ನಗರ ಸೌಂದರೀಕರಣ ರಾಮಕೃಷ್ಣ ಮಿಷನ್‌ನಂತಹ ಸಂಸ್ಥೆಗಳು ಶ್ರಮಪಡುತ್ತಿದೆ. ಆದರೆ ಕೆಲವರು ಪೋಸ್ಟರ್, ಸ್ಟಿಕ್ಕರ್‌ಗಳನ್ನು ಅಂಟಿಸಿ ನಗರದ ಸೌಂದರ್ಯಕ್ಕೆ ಅಡ್ಡಿಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಮನಪಾ ಅಧಿಕಾರಿಗಳ ಜತೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ರಥಬೀದಿ ಸ್ಕೂಲ್ ಬುಕ್ ಕಂಪನಿಯಲ್ಲಿ ಹಗಲು ಹೊತ್ತು ದೊಡ್ಡ ವಾಹನಗಳು ಅನ್‌ಲೋಡ್, ಲೋಡ್ ಮಾಡುವುದರಿಂದ ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು.

ಮೂಡುಬಿದಿರೆ ಮುನ್ಸಿಪಾಲಿಟಿ ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಇವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸಾರ್ವಜನಿಕರೊಬ್ಬರು ದೂರಿದರು. ಇದಕ್ಕೆ ಉತ್ತರಿಸಿದ ಕಮಿಷನರ್ ಈ ಬಗ್ಗೆ ಎಸಿಬಿ (ಭಷ್ಟಾಚಾರ ನಿಗ್ರಹ ದಳ)ಗೆ ದೂರು ನೀಡುವಂತೆ ಸಲಹೆ ನೀಡಿದರು.

‘ಪೊಲೀಸ್ ಫೋನ್ ಇನ್’ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ ಎ., ಎಎಸ್ಸೈ ಯೂಸುಫ್, ಹೆಡ್‌ ಕಾನ್‌ಸ್ಟೇಬಲ್ ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.

ನಗರದೊಳಗೆ ಬೆಳಗ್ಗೆ 8ರಿಂದ ರಾತ್ರಿ 8ರತನಕ ಯಾವುದೇ ಕಂಟ್ರಾಕ್ಟ್ ಕ್ಯಾರಿಯೇಜ್ ಬಸ್‌ಗಳು ಬರುವಂತಿಲ್ಲ. ಇದರ ವಿರುದ್ಧ ವಾರದಿಂದ ಕಾರ್ಯಾಚರಣೆ ಆರಂಭಿಸಿದ್ದು, ಸಂಪೂರ್ಣ ನಿಲ್ಲುವವರೆಗೆ ಕಾರ್ಯಾಚರಣೆ ಮುಂದುವರಿಯಲಿದೆ. ಬಸ್ ಮಾಲಕರು ಸಾರ್ವಜನಿರಿಗೆ ತೊಂದರೆಯಾಗದಂತೆ ನಗರದ ಹೊರ ಭಾಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ ಎಂದು ಪೊಲೀಸ್ ಆಯುಕ್ತರು ಸೂಚನೆ ನೀಡಿದರು.

ನಗರದಲ್ಲಿ ಪಟಾಕಿ ಮಾರಾಟ ವ್ಯವಹಾರಕ್ಕೆ ಸಂಬಂಧಿಸಿದ ಖಾಯಂ ಮಳಿಗೆಗಳು ಐದು ಮಾತ್ರ ಇವೆ. ಅವುಗಳು ಪೆಟ್ರೋಲಿಯಂ ಆ್ಯಂಡ್ ಎಕ್ಸ್‌ಪ್ಲೋಸಿವ್ಸ್ ಆರ್ಗನೈಜೇಶನ್ ಆ್ಯಕ್ಟ್ (ಪೆಸೊ) ಪ್ರಕಾರ ಪನವಾನಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಮಳಿಗೆಗಳಾಗಿವೆ ಎಂದು ಪೊಲೀಸ್ ಕಮಿನರ್ ಟಿ.ಆರ್. ಸುರೇಶ್ ತಿಳಿಸಿದರು.

ಪರವಾನಿಗೆ ಪಡೆದು ಕಾರ್ಯ ನಿರ್ವಹಿಸುತ್ತಿದ್ದ ಎಲ್ಲಾ 11 ಖಾಯಂ ಪಟಾಕಿ ಮಳಿಗೆಗಳ ಪರವಾನಿಗೆಯನ್ನು ನವೀಕರಿಸಲಾಗಿಲ್ಲ. ಈ ವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಿಗೆ ಕೋರಿ 91 ಅರ್ಜಿಗಳು ಬಂದಿದ್ದು, ಈ ಪೈಕಿ ಸಂಬಂಧ ಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರಗಳನ್ನು ಹಾಜರುಪಡಿಸಿದ 82 ಮಳಿಗೆಗಳಿಗೆ ಮಾತ್ರ ಪರವಾನಿಗೆ ನೀಡಲಾಗಿತ್ತು. ದೀಪಾವಳಿ ಆಚರಣೆಯ ವೇಳೆ ನ.5ರಿಂದ 8ರ ತನಕ ಹಾಗೂ ತುಳಸಿ ಪೂಜೆ ನಡೆಯುವ ನ.20,21ರಂದು ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ ಎಂದು ಸುರೇಶ್ ಹೇಳಿದರು.

ಪಟಾಕಿ ಮಾರಾಟ ಮಾಡ ಬೇಕಾದರೆ ಮಳಿಗೆಯ ಸುತ್ತಲೂ ತೆರೆದ ವಾತಾವರಣ (ಓಪನ್ ಸ್ಪೇಸ್) ಇರಬೇಕೆಂಬ ನಿಯಮವಿದೆ. ಪರವಾನಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ 8 ಅಂಗಡಿಗಳ ಸುತ್ತ ಈಗ ಓಪನ್ ಸ್ಪೇಸ್ ಇಲ್ಲ. ಅಕ್ಕಪಕ್ಕದಲ್ಲಿ ಇತರ ಅಂಗಡಿಗಳಿದ್ದು, ಮಾರುಕಟ್ಟೆ ಪ್ರದೇಶದಂತಾಗಿವೆ. ಹಾಗಾಗಿ ಪರವಾನಿಗೆ ನವೀಕರಣ ಮಾಡಿಲ್ಲ. ಇದನ್ನು ಪ್ರಶ್ನಿಸಿ ಮೂಡುಬಿದಿರೆಯ ಪಟಾಕಿ ಅಂಗಡಿಯವರು ಹೈಕೋಟ್ ಮೆಟ್ಟಲೇರಿದ್ದರು. ಆದರೆ ಹೈಕೋರ್ಟ್ ಪೊಲೀಸ್ ಕಮಿಷನರೆಟ್‌ನ ಕ್ರಮವನ್ನು ಸಮರ್ಥಿಸಿ ತೀರ್ಪು ನೀಡಿತ್ತು. ಪರವಾನಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸದಿರುವ ಮೂರು ಮಳಿಗೆಗಳವರಿಗೆ ಶೋಕಾಸ್ ನೋಟೀಸು ಜಾರಿ ಮಾಡಲಾಗಿದೆ ಎಂದು ಟಿ.ಆರ್. ಸುರೇಶ್ ತಿಳಿಸಿದರು.

500 ಕೆ.ಜಿ. ಮತ್ತು ಅದಕ್ಕಿಂತ ಕಡಿಮೆ ತೂಕದ ಪಟಾಕಿ ಮಾರಾಟ ಮಾಡುವವರಿಗೆ ಪೊಲೀಸ್ ಕಮಿಷನರೆಟ್ ವತಿಯಿಂದ ಪರವಾನಿಗೆ ನೀಡಲಾಗುತ್ತದೆ. 500 ಕೆ.ಜಿ. ಗಿಂತ ಅಧಿಕ ಪ್ರಮಾಣದ ಪಟಾಕಿ ಮಾರಾಟ ಮಾಡಬೇಕಾದರೆ ಪೆಟ್ರೋಲಿಯಂ ಆ್ಯಂಡ್ ಎಕ್ಸ್‌ಪ್ಲೋಸಿವ್ಸ್ ಆರ್ಗನೈಜೇಶನ್ ಆ್ಯಕ್ಟ್ (ಪೆಸೊ) ಪ್ರಕಾರ ಪರವಾನಿಗೆ ಪಡೆಯುವುದು ಅನಿವಾರ್ಯ. ಪ್ರಸ್ತುತ ನಗರದಲ್ಲಿ ಪೆಟ್ರೋಲಿಯಂ ಆ್ಯಂಡ್ ಎಕ್ಸ್‌ಪ್ಲೋಸಿವ್ಸ್ ಆರ್ಗನೈಜೇಶನ್ ಆ್ಯಕ್ಟ್‌ನಡಿ ಕಾರ್ಯ ನಿರ್ವಹಿಸುತ್ತಿರುವ 5 ಪಟಾಕಿ ಮಳಿಗೆಗಳು ಮಾತ್ರ ಇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News