×
Ad

20 ವರ್ಷ ಹಳೆಯ ಸ್ಕೂಟರ್‌ನಲ್ಲಿ ತಾಯಿ ಮಗನ ತೀರ್ಥಯಾತ್ರೆ

Update: 2018-11-09 18:37 IST

ಉಡುಪಿ, ನ.9: ಕುಟುಂಬದ ಸೇವೆಯಲ್ಲಿಯೇ ಜೀವನ ಕಳೆದ ತನ್ನ ವಯೋ ವೃದ್ಧ ತಾಯಿಯ ಮಹದಾಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಮಗನೊಬ್ಬ ತಾಯಿ ಜೊತೆ ತೀರ್ಥಯಾತ್ರೆ ಕೈಗೊಂಡಿದ್ದು, ಇವರಿಬ್ಬರು ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿ 20 ವರ್ಷಗಳ ಹಳೆಯ ಸ್ಕೂಟರ್‌ನಲ್ಲಿ ಸುಮಾರು ಏಳು ರಾಜ್ಯಗಳಲ್ಲಿ ಸುತ್ತಾಡಿಕೊಂಡು ಬಂದಿದ್ದಾರೆ.

ಇದು ಮೈಸೂರಿನ ಡಿ. ಕೃಷ್ಣಕುಮಾರ್ (39) ಹಾಗೂ ಅವರ ತಾಯಿ ಚೂಡರತ್ನ (70) ಅವರ ‘ಮಾತೃ ಸೇವಾ ಸಂಕಲ್ಪ ಯಾತ್ರೆ’ಯ ಕಥೆ.

ಬ್ರಹ್ಮಚಾರಿ ಆಗಿರುವ ಡಿ.ಕೃಷ್ಣಕುಮಾರ್, ಚೂಡರತ್ನ ಅವರ ಏಕೈಕ ಪುತ್ರ. ಇವರ ತಂದೆ ನಾಲ್ಕು ವರ್ಷಗಳ ಹಿಂದೆ ತೀರಿ ಹೋಗಿದ್ದರು. ಜ.16ರಂದು ಮೈಸೂರಿನಿಂದ ಹೊರಟ ಇವರ ಈ ಯಾತ್ರೆಯು ಕೇರಳ, ತಮಿಳುನಾಡ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಎಲ್ಲ ದೇವಸ್ಥಾನಗಳ ಭೇಟಿ ಬಳಿಕ ಇದೀಗ ಕರಾವಳಿ ಕರ್ನಾಟಕದಲ್ಲಿ ಮುಂದುವರಿಯುತ್ತಿದೆ. ಈವರೆಗೆ ಇವರು ಈ ಹಳೆಯ ಸ್ಕೂಟರ್‌ನಲ್ಲಿ 27,400ಕಿ.ಮಿ. ದೂರವನ್ನು ಕ್ರಮಿಸಿದ್ದಾರೆ.

ಮೈಸೂರಿನಿಂದ ಪ್ರಾರಂಭಗೊಂಡ ಇವರ ಯಾತ್ರೆಯ ಮೊದಲ ಎರಡು ತಿಂಗಳು ಕೇರಳ ರಾಜ್ಯದಲ್ಲಿ, ಅಲ್ಲಿಂದ ಎರಡು ತಿಂಗಳ ಕಾಲ ತಮಿಳುನಾಡನ್ನು ಮುಗಿಸಿ ಬಳಿಕ ಕರ್ನಾಟಕ ಮೂಲಕ ಆಂಧ್ರಪ್ರದೇಶ, ನಂತರ ತೆಲಂಗಾಣ, ಮಹಾರಾಷ್ಟ್ರ, ಗೋವಾ ರಾಜ್ಯಗಳನ್ನು ಪೂರ್ಣಗೊಳಿಸಿದೆ. ಇದೀಗ ತಾಯಿ- ಮಗ ಕರಾವಳಿ ಕರ್ನಾಟಕದಲ್ಲಿ ಯಾತ್ರೆ ಕೈಗೊಂಡಿದ್ದು, ಗೋವಾದಿಂದ ಕಾರವಾರ ಮಾರ್ಗವಾಗಿ ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಬಂದಿದ್ದಾರೆ. ಮುಂದೆ ಇವರು ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸಲಿದ್ದಾರೆ.

ಉದ್ಯೋಗ ತೊರೆದು ಯಾತ್ರೆ

ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ 13 ವರ್ಷಗಳ ಕಾಲ ದುಡಿದ ಕೃಷ್ಣಕುಮಾರ್ ತನ್ನ ತಾಯಿಯನ್ನು ತೀರ್ಥ ಯಾತ್ರೆಗೆ ಕರೆದೊಯ್ಯಲು ಉದ್ಯೋಗವನ್ನು ತೊರೆದು, 2001ರಲ್ಲಿ ತಂದೆ ತೆಗೆದುಕೊಟ್ಟ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ ಈ ಯಾತ್ರೆಯನ್ನು ನಡೆಸುತ್ತಿದ್ದಾರೆ.

‘20 ವರ್ಷ ಹಳೆಯ ಸ್ಕೂಟರ್ ಆಗಿದ್ದರೂ ಯಾತ್ರೆ ಮಧ್ಯೆ ಎಲ್ಲೂ ಕೈಕೊಟ್ಟಿಲ್ಲ. 16 ಸಾವಿರ ಕಿ.ಮೀ. ಕ್ರಮಿಸಿದ ಸಂದರ್ಭದಲ್ಲಿ ಒಂದು ಟಯರ್ ಪಂಕ್ಚರ್ ಆಗಿದೆ ಬಿಟ್ಟರೆ ಉಳಿದಂತೆ ಯಾವುದೇ ಸಮಸ್ಯೆ ಆಗಿಲ್ಲ. ದಿನಕ್ಕೆ ಕನಿಷ್ಠ 30ಕಿ.ಮೀ. ಗರಿಷ್ಠ 170ಕಿ.ಮೀ. ದೂರ ಕ್ರಮಿಸಿದ್ದೇವೆ. ನಾವು ಹೋದ ಕಡೆಗಳಲ್ಲಿ ವಿಶ್ರಾಂತಿ ಪಡೆದು, ಆ ಊರನ್ನು ಸುತ್ತಾಡಿಕೊಂಡು ಮುಂದೆ ಸಾಗುತ್ತಿದ್ದೇವೆ. ಭದ್ರತೆಗಾಗಿ ಕೂಡಿಟ್ಟ ಹಣದ ಬಡ್ಡಿ ಹಣದಲ್ಲಿ ಈ ಯಾತ್ರೆ ಮಾಡುತ್ತಿದ್ದೇವೆ’ ಎಂದು ಕೃಷ್ಣಕುಮಾರ್ ತಿಳಿಸಿದರು.

‘ಎಸೆಸೆಲ್ಸಿ ಬಳಿಕ ಹಿಂದಿ ಶಿಕ್ಷಕ್ ತರಬೇತಿಯ ಸಂದರ್ಭದಲ್ಲಿದ್ದ ತಾಯಿಯ ಗೆಳತಿಯನ್ನು ಕಂಡು ಹಿಡಿದು 47ವರ್ಷಗಳ ಬಳಿಕ ಅವರ ಸ್ನೇಹಕ್ಕೆ ಜೀವ ತಂದಿ ದ್ದೇನೆ. ಯಾತ್ರೆ ಮಧ್ಯೆ ಸಾಗರದಲ್ಲಿರುವ ಚಂದ್ರಮತಿಯನ್ನು ಭೇಟಿ ಮಾಡಿ ಒಂದು ವಾರಗಳ ಕಾಲ ಆತಿಥ್ಯ ಸ್ವಿಕರಿಸಿ ಬಂದಿದ್ದೇವೆ. ಮುಂದೆ ವಿಟ್ಲದಲ್ಲಿರುವ ಕಜೆ ಜಯಲಕ್ಷ್ಮಿಯನ್ನು ಭೇಟಿಯಾಗಲಿದ್ದೇವೆ’ ಎಂದರು.

‘ಇಡೀ ಯಾತ್ರೆಯಲ್ಲಿ ನಾವು ಎಲ್ಲಿಯೂ ಹೊಟೇಲ್ ಊಟ, ಉಪಹಾರ ಸೇವಿಸಿಲ್ಲ. ಮಠ ಮಂದಿರಗಳಲ್ಲಿ ಆಶ್ರಯ ಪಡೆದು ಅಲ್ಲೇ ಭೋಜನ ಸ್ವೀಕರಿ ಸುತ್ತಿದ್ದೆವು. ದಾರಿ ಮಧ್ಯೆ ಕಂಡ ಬೋರ್‌ವೆಲ್ ನೀರನ್ನೇ ಕುಡಿಯುತ್ತಿದ್ದೆವು. ಇದರಿಂದ ನಮಗೆ ಯಾತ್ರೆಯುದ್ದಕ್ಕೂ ಶೀತ ನೆಗಡಿ, ಜ್ವರ, ಬೆನ್ನುನೋವಿನ ಸಮಸ್ಯೆ ಕಾಡಿಲ್ಲ’ ಎನ್ನುತ್ತಾರೆ ಚೂಡರತ್ನ.

‘ಅವಿಭಕ್ತ ಕುಟುಂಬದಲ್ಲಿ ನನ್ನ ತಾಯಿ ಕುಟುಂಬದ ಯೋಗಕ್ಷೇಮದಲ್ಲೇ ಜೀವನ ಕಳೆದರು. 67 ವರ್ಷಗಳ ಕಾಲ ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದ ತಾಯಿ ಯಾವುದೇ ಪುಣ್ಯ ಕ್ಷೇತ್ರಗಳಿಗೆ ಹೋಗಿಲ್ಲ. ನಾಲ್ಕು ವರ್ಷಗಳ ಹಿಂದೆ ತಂದೆ ತೀರಿ ಹೋದ ಬಳಿಕ ತಾಯಿಯ ತೀರ್ಥಯಾತ್ರೆ ಮಾಡಬೇಕೆಂಬ ಕನಸು ಹಾಗೂ ಬಯಕೆಯನ್ನು ಮನಗಂಡು ನನ್ನ ಉದ್ಯೋಗವನ್ನು ತೊರೆದು ಈ ಯಾತ್ರೆಯನ್ನು ಹಮ್ಮಿಕೊಂಡಿದ್ದೇನೆ’
-ಡಿ.ಕೃಷ್ಣಕುಮಾರ್ ಮೈಸೂರು

‘ಈ ಯಾತ್ರೆ ತುಂಬಾ ಖುಷಿ ಕೊಟ್ಟಿದೆ. ಸ್ಕೂಟರ್‌ನಲ್ಲಿ ತಿರುಗಾಡುವಾಗ ಯಾವುದೇ ತೊಂದರೆ ಆಗಿಲ್ಲ. ಯಾತ್ರೆಗೆ ಮೊದಲು ಮಗ ಪ್ರತಿದಿನ ಸ್ಕೂಟರ್ ನಲ್ಲಿ ಸುಮಾರು 40-45ಕಿ.ಮೀ. ದೂರ ಕರೆದುಕೊಂಡು ಹೋಗುತ್ತಿದ್ದ. ಇದರಿಂದ ನನಗೆ ಅಭ್ಯಾಸ ಆಯಿತು. ಇಂದು ತಂದೆತಾಯಿಯನ್ನು ಗಂಡು ಮಕ್ಕಳು ನೋಡುವುದೇ ಅಪರೂಪ. ಇಂತಹ ಕಾಲಘಟ್ಟದಲ್ಲಿ ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ’

-ಚೂಡರತ್ನ ಮೈಸೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News