‘ಬೆಲ್ಚಪ್ಪ’ ತುಳು ಸಿನೆಮಾಕ್ಕೆ ಮುಹೂರ್ತ
ಉಡುಪಿ, ನ.9: ಜಯದುರ್ಗಾ ಪ್ರೊಡಕ್ಷನ್ ನಿರ್ಮಿಸುತ್ತಿರುವ ‘ಬೆಲ್ಚಪ್ಪ’ ತುಳು ಸಿನೆಮಾದ ಮುಹೂರ್ತ ಸಮಾರಂಭವು ಶುಕ್ರವಾರ ಬೈಲೂರು ಶ್ರೀಮಹಿಷ ಮರ್ದಿನಿ ದೇವಸ್ಥಾನದಲ್ಲಿ ಜರಗಿತು.
ಕನ್ನಪಾರ್ಡಿ ಶ್ರೀಜಯದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪಕರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಕ್ಯಾಮರಾಕ್ಕೆ ಚಾಲನೆ ನೀಡಿದರು. ಉದ್ಯಮಿ ಪ್ರಕಾಶ್ ನಾಯಕ್ ಆರಂಭ ಫಲಕವನ್ನು ನೆರವೇರಿಸಿದರು.
ಉದ್ಯಮಿ ರಾಜೇಶ್ ಕರ್ಕೇರ, ಮೂಡಬಿದ್ರೆ ವಕೀಲರ ಸಂಘದ ಅಧ್ಯಕ್ಷ ನಾಗೇಶ್ ಶೆಟ್ಟಿ, ವಾಮನ ಮುರಳಿ, ಮೋಹನ್‌ದಾಸ್ ರೈ, ಕನ್ನಡ ಚಿತ್ರನಟ ಸಚಿನ್ ಪುರೋಹಿತ್, ರವಿ ಎಸ್.ದೇವಾಡಿಗ, ಮೋಹನ್‌ದಾಸ್ ಹಿರಿಯಡ್ಕ, ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಯಶೋದ ಕೇಶವ್, ನಗರಸಭೆ ಸದಸ್ಯ ವಿಜಯ ಮುಖ್ಯ ಅತಿಥಿಗಳಾಗಿದ್ದರು.
ಬಳಿಕ ಮಾತನಾಡಿದ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶಕ ರಜನೀಶ್ ದೇವಾಡಿಗ, ಸಂಪೂರ್ಣ ಹಾಸ್ಯಮಯವಾದ ಈ ಸಿನೆಮಾ ವಿಭಿನ್ನ ರೀತಿಯ ಕಥೆಯನ್ನು ಹೊಂದಿದೆ. ಗೆಳೆಯರೇ ಸೇರಿ ಹಣ ಹೊಂದಿಸಿ ಸುಮಾರು 30ಲಕ್ಷ ರೂ. ಬಜೆಟ್‌ನಲ್ಲಿ ಈ ಸಿನೆಮಾವನ್ನು ನಿರ್ಮಿಸುತ್ತಿದ್ದೇವೆ. ಸುಮಾರು 50 ಕಲಾವಿದರು ಇದರಲ್ಲಿ ನಟಿಸುತ್ತಿದ್ದು, ಹೊಸಮುಖಗಳಿಗೆ ಅವಕಾಶ ನೀಡಲಾಗಿದೆ ಎಂದರು.
ಉಡುಪಿ ಮತ್ತು ಮಲ್ಪೆ ಪರಿಸರದಲ್ಲಿ 25 ದಿನಗಳಲ್ಲಿ ಚಿತ್ರೀಕರಣ ಮುಗಿಸಿ, ಯುಗಾದಿ ಸಂದರ್ಭದಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದೇವೆ. ಇದರಲ್ಲಿ ನಾಲ್ಕು ಹಾಡುಗಳು, ಒಂದು ಫೈಟ್ ಇದೆ. ಸಿನೆಮಾಗೆ ಸಂಗೀತ ವಿಕ್ರಮ್ ಸೆಲ್ವ, ವೈ.ಎಸ್.ಶ್ರೀಧರ್ ಸಂಕಲನ ಹಾಗೂ ಸಾಹಸ ಕೌರವ್ ವೆಂಕಟೇಶ್, ನೃತ್ಯ ಸ್ಟಾರ್ ಗಿರಿ ನೀಡಿದ್ದಾರೆ ಎಂದು ಅವರು ಹೇಳಿದರು.
ಚಿತ್ರದ ಸಿನಿಮಾಟೋಗ್ರಾಫರ್ ಲಕ್ಷ್ಮೀಶ ಶೆಟ್ಟಿ ಮಾತನಾಡಿ, ಟ್ರೋಲಿ ಟ್ರಾಕ್ ಬದಲು ದೇಶದಲ್ಲೇ ಪ್ರಥಮ ಎಂಬಂತೆ ಸ್ಟಡಿ ಸೈಕಲ್‌ನ್ನು ಸಿನೆಮಾದಲ್ಲಿ ಬಳಕೆ ಮಾಡಲಾಗಿದೆ. ಹಾಲಿವುಡ್ ಸಿನೆಮಾಗಳಲ್ಲಿ ಬಳಸುವ ಈ ಸೈಕಲ್‌ನ್ನು ನಾನೇ ಸುಮಾರು ಒಂದು ಲಕ್ಷ ರೂ. ವ್ಯಯಿಸಿ ತಯಾರಿಸಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಸ್ಯನಟ ಅರವಿಂದ ಬೋಳಾರ್, ಚಿತ್ರದ ನಾಯಕಿ ಯಶಸ್ವಿನಿ ದೇವಾಡಿಗ, ನಟಿ ಸುಕನ್ಯಾ ಉಪಸ್ಥಿತರಿದ್ದರು.