ಮೋದಿ ಸರಕಾರದಿಂದ ಪ್ರಜಾಸತ್ತತೆ ಬುಡಮೇಲು: ಸೊರಕೆ
ಉಡುಪಿ, ನ.9: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅನೇಕ ತೀರ್ಮಾನಗಳು ದೇಶದ ಪ್ರಜಾಸತ್ತತ್ತೆಯನ್ನು ಬುಡಮೇಲು ಮಾಡುತ್ತಿವೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದ ನೋಟು ಅಪ ನಗದೀಕರಣಕ್ಕೆ ಎರಡು ವರ್ಷ ಸಂದ ಹಿನ್ನೆಲೆಯಲ್ಲಿ ಅದರ ರೂವಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಅಜ್ಜರಕಾಡು ಹುತಾತ್ಮ ಸ್ಮಾರಕರ ಬಳಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆ ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಕಪ್ಪು ಹಣ ಹತೋಟಿ, ಖೋಟಾ ನೋಟುಗಳ ನಿಯಂತ್ರಣ ಸೇರಿದಂತೆ ಅನೇಕ ಆಸೆಗಳನ್ನು ಜನರಿಗೆ ಹುಟ್ಟಿಸಿ ನೋಟು ಅಮಾನ್ಯಗೊಳಿಸಲಾಯಿತು. ಆದರೆ ಇವರು ಕಪ್ಪು ಹಣ ಹೊಂದಿರುವರ ಹಣವನ್ನು ಬಿಳಿ ಹಣವನ್ನಾಗಿ ಮಾಡಿ ಜನರಿಗೆ ಮೋಸ ಮಾಡಿದರು. ಜಿಎಸ್‌ಟಿ, ನೋಟು ಅಮಾನ್ಯದಿಂದ ಅನೇಕ ಉದ್ಯಮಗಳು ನಾಶವಾಗಿ ಉದ್ಯೋಗ ಕಳೆದುಕೊಳ್ಳುವಂತಾಯಿತು. ದೇಶದ ಸಂಪೂರ್ಣ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಕಾರ್ಯ ಎನ್‌ಡಿಎ ಸರಕಾರದಿಂದ ನಡೆದಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ ಮಾತನಾಡಿ, ನೋಟು ರದ್ಧತಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಹಾಳಾಗಿದೆ. ಖೋಟ ನೋಟು ಬಳಕೆ ಇನ್ನು ಕೂಡ ಕಡಿಮೆ ಆಗಿಲ್ಲ. ಕಪ್ಪು ಹಣದ ಹೆಸರಿನಲ್ಲಿ ಮೋದಿ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ, ದೇಶದ ಖಜಾನೆ ರಕ್ಷಣೆ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮೋದಿ, ಇಡೀ ದೇಶವನ್ನೇ ಲೂಟಿ ಮಾಡುತ್ತಿದ್ದಾರೆ. ನೋಟು ಅಮಾನ್ಯದಿಂದ ಕಪ್ಪು ಹಣದ ಸಮಸ್ಯೆ ಇನ್ನು ಪರಿ ಹಾರ ಕಂಡಿಲ್ಲ. ಈ ಹೆಸರಿನಲ್ಲಿ ಕಪ್ಪು ಹಣವನ್ನು ಯಾವುದೇ ದಂಡ ಇಲ್ಲದೆ ಬಿಳಿ ಹಣವನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾದ ಪ್ರಖ್ಯಾತ್ ಶೆಟ್ಟಿ, ವರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ನರಸಿಂಹ ಮೂರ್ತಿ, ದೇವಿಪ್ರಸಾದ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಮುನಿ ಯಾಲು ಉದಯ ಕುಮಾರ್ ಶೆಟ್ಟಿ, ಮುರಳಿ ಶೆಟ್ಟಿ, ಸತೀಶ್ ಅಮೀನ್ ಪಡು ಕೆರೆ, ನಿತ್ಯಾನಂದ ಶೆಟ್ಟಿ, ಶಬ್ಬೀರ್ ಉಡುಪಿ, ಎಂ.ಪಿ.ಮೊದಿನಬ್ಬ, ಅಝೀಝ್ ಹೆಜಮಾಡಿ, ಕಿಶನ್ ಹೆಗ್ಡೆ ಕೊಳ್ಕೆಬೈಲು ಮೊದಲಾದವರು ಉಪಸ್ಥಿತರಿದ್ದರು.