ಬಂಟ್ವಾಳ: ಸರಕಾರಿ ವೈದ್ಯಕೀಯ ಸವಲತ್ತುಗಳ ಮಾಹಿತಿ ಕಾರ್ಯಾಗಾರ
ಬಂಟ್ವಾಳ, ನ. 9: ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (ಡಿಕೆಎಂಒ) ರಿಯಾದ್ ಇದರ ಆಶ್ರಯದಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ಸಹಭಾಗಿತ್ವದಲ್ಲಿ ಸರಕಾರಿ ವೈದ್ಯಕೀಯ ಸವಲತ್ತುಗಳ ಮಾಹಿತಿ ಕಾರ್ಯಾಗಾರವು ಬಿ.ಸಿ.ರೋಡ್ ಜೋಡುಮಾರ್ಗದ ರಿಕ್ಷಾ ಭವನದಲ್ಲಿ ಶುಕ್ರವಾರ ನಡೆಯಿತು.
ಡಿಕೆಎಂಒ ಸದಸ್ಯ ಅಬ್ಬಾಸ್ ಉಚ್ಚಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಪ್ರಜ್ಞೆಯ ಕೊರತೆಯಿಂದ ನಮ್ಮ ಸಮುದಾಯ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ನಾನಾ ರೋಗಗಳಿಗೆ ಇಂದು ಆಸ್ಪತ್ರೆಯಲ್ಲಿ ದುಬಾರಿ ವೆಚ್ಚ ಭರಿಸಲಾಗದೆ ಒದ್ದಾಡುವ ಸನ್ನಿವೇಶ ಉಂಟಾಗಿದೆ. ಇದು ನಮ್ಮಲ್ಲಿರುವ ಆರೋಗ್ಯ ಪ್ರಜ್ಞೆ ಯ ಕೊರತೆಯೇ ಕಾರಣ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಸಲುವಾಗಿ ಆರೋಗ್ಯ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಾಹಿತಿ ನೀಡಲು ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಇದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
ಟಿಆರ್ ಎಫ್ ಸಲಹೆಗಾರ ರಫೀಕ್ ಮಾಸ್ಟರ್ ಪ್ರಸ್ತಾವಿಕವಾಗಿ ಮಾತನಾಡಿ, ಸರಕಾರಿ ವೈದ್ಯಕೀಯ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಇನ್ನೊಬ್ಬರಿಗೂ ತಿಳಿಸುವ ಕೆಲಸವಾಗಬೇಕಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಜಗನ್ನಾಥ್ ಅವರು, ಸರಕಾರಿ ವೈದ್ಯಕೀಯ ಯೋಜನೆ, ಸವಲತ್ತುಗಳ ಮಾಹಿತಿ, ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯಕೀಯ ಸವಲತ್ತುಗಳ ಮಾಹಿತಿ ಹಾಗೂ ಕಟ್ಟಡ ಕಾರ್ಮಿಕರಿಗೆ ವೈದ್ಯಕೀಯ ಇನ್ಶುರೆನ್ಸ್ ಮತ್ತು ಇಎಸ್‍ಐ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ, ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ, ಆಲಡ್ಕ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕರ್, ಟಿಆರ್‍ಎಫ್ ಸದಸ್ಯ ಜಸೀಂ ಉಪಸ್ಥಿತರಿದ್ದರು.
ಟಿಆರ್ ಎಫ್ ಪ್ರಧಾನ ಕಾರ್ಯದರ್ಶಿ ಹಮೀದ್ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಶಾಹಿದ್ ಸಹಕರಿಸಿದರು.