ಎಲ್‌ಪಿಜಿ ಬೆಲೆ 2 ರೂ. ಏರಿಕೆ
ಹೊಸದಿಲ್ಲಿ,ನ.9: ಸರಕಾರವು ಎಲ್‌ಪಿಜಿ ವಿತರಕರ ಕಮಿಷನ್ ಹೆಚ್ಚಿಸಿರುವ ಪರಿಣಾಮ ಶುಕ್ರವಾರ ಗೃಹಬಳಕೆ ಅಡುಗೆ ಅನಿಲದ ಪ್ರತಿ ಸಿಲಿಂಡರ್‌ನ ಬೆಲೆಯಲ್ಲಿ ಎರಡು ರೂ.ಏರಿಕೆಯಾಗಿದೆ.
ದಿಲ್ಲಿಯಲ್ಲೀಗ 14.2 ಕೆಜಿಯ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 505.34 ರೂ.ನಿಂದ 507.42 ರೂ.ಗೆ ಹೆಚ್ಚಿಸಲಾಗಿದೆ. ತೈಲ ಸಚಿವಾಲಯದ ಆದೇಶದ ಮೇರೆಗೆ ಬೆಲೆಗಳನ್ನು ಹೆಚ್ಚಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬೆಲೆ ಅಧಿಸೂಚನೆಯಲ್ಲಿ ತಿಳಿಸಿವೆ.
ಈ ಹಿಂದೆ ಸೆ.2017ರಲ್ಲಿ ಗೃಹಬಳಕೆ ಎಲ್‌ಪಿಜಿ ವಿತರಕರಿಗೆ ಪ್ರತಿ 14.2 ಕೆಜಿ ಸಿಲಿಂಡರ್‌ಗೆ 48.89 ರೂ. ಮತ್ತು 5 ಕೆಜಿ ತೂಕದ ಸಿಲಿಂಡರ್‌ಗೆ 24.20 ರೂ.ಕಮಿಷನ್ ನಿಗದಿಗೊಳಿಸಲಾಗಿತ್ತು. ಇದೀಗ ಇವುಗಳನ್ನು ಅನುಕ್ರಮವಾಗಿ 50.58 ರೂ. ಮತ್ತು 25.29 ರೂ.ಗಳಿಗೆ ಹೆಚ್ಚಿಸಲಾಗಿದೆ.
ಇದು ಈ ತಿಂಗಳಲ್ಲಿ ಎರಡನೇ ಬೆಲೆ ಏರಿಕೆಯಾಗಿದೆ. ನ.1ರಂದು ಮೂಲಬೆಲೆಯ ಮೇಲೆ ಜಿಎಸ್‌ಟಿ ಹೆಚ್ಚಳದಿಂದಾಗಿ ಪ್ರತಿ 14.2 ಕೆಜಿ ಸಿಲಿಂಡರ್‌ನ ಬೆಲೆ 2.94 ರೂ.ಏರಿಕೆಯಾಗಿದ್ದು,ಜೂನ್‌ನಿಂದ ಒಟ್ಟು 16.21ರೂ. ಹೆಚ್ಚಳವಾಗಿದೆ.
ಶುಕ್ರವಾರದ ಏರಿಕೆಯ ಬಳಿಕ ಪ್ರತಿ 14.2 ಕೆಜಿ ಸಿಲಿಂಡರ್‌ಗೆ ಮುಂಬೈನಲ್ಲಿ 505.05 ರೂ.,ಕೋಲ್ಕತಾದಲ್ಲಿ 510.70 ರೂ. ಮತ್ತು ಚೆನ್ನೈನಲ್ಲಿ 495.39 ರೂ.ಗಳಾಗಿವೆ. ಸ್ಥಳೀಯ ತೆರಿಗೆಗಳು ಮತ್ತು ಸಾಗಾಣಿಕೆ ವೆಚ್ಚಗಳನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬೆಲೆಗಳು ಭಿನ್ನವಾಗಿರುತ್ತವೆ.
ಗ್ರಾಹಕರಿಂದ ಹೆಚ್ಚುವರಿ ಡೆಲಿವರಿ ಶುಲ್ಕ ದೋಚುತ್ತಿರುವ ವಿತರಕರು
ಪ್ರತಿ 14.2 ಕೆಜಿ ಸಿಲಿಂಡರ್‌ಗೆ ವಿತರಕರಿಗೆ ನಿಗದಿಗೊಳಿಸಲಾಗಿರುವ 50.58 ರೂ.ಕಮಿಷನ್‌ನಲ್ಲಿ 20.50 ರೂ.ಗಳ ಮತ್ತು 5 ಕೆಜಿ ಸಿಲಿಂಡರ್‌ಗೆ ನೀಡಲಾಗುವ 25.29 ರೂ.ಕಮಿಷನ್‌ನಲ್ಲಿ 10.25 ರೂ.ಗಳ ಡೆಲಿವರಿ ಶುಲ್ಕಗಳೂ ಸೇರಿವೆ. ನೇರವಾಗಿ ವಿತರಕರ ಮಳಿಗೆಯಿಂದ ಸಿಲಿಂಡರ್ ಪಡೆದುಕೊಳ್ಳುವ ಗ್ರಾಹಕರಿಗೆ ಡೆಲಿವರಿ ಶುಲ್ಕವನ್ನು ವಿಧಿಸುವಂತಿಲ್ಲ. ವಿತರಕರಿಗೆ ನೀಡುವ ಕಮಿಷನ್‌ನಲ್ಲಿ ಡೆಲಿವರಿ ಶುಲ್ಕಗಳೂ ಸೇರಿರುತ್ತವೆ ಎನ್ನುವುದು ಹೆಚ್ಚಿನ ಗ್ರಾಹಕರಿಗೆ ತಿಳಿದಿಲ್ಲ.ಇದರ ದುರುಪಯೋಗ ಮಾಡಿಕೊಳ್ಳುತ್ತಿರುವ ವಿತರಕರು ಗ್ರಾಹಕರಿಂದ ಹೆಚ್ಚುವರಿ ಡೆಲಿವರಿ ಶುಲ್ಕ ವಸೂಲು ಮಾಡುವುದು ಮಂದುವರಿದಿದೆ.